ಕೊಚ್ಚಿ: ಕೇರಳದಲ್ಲಿ ಇತರ ವಸ್ತುಗಳ ಜೊತೆಗೆ ಅಕ್ಕಿ ಬೆಲೆಯೂ ಗಗನಮುಖವಾಗುತ್ತಿದೆ. ಕಳೆದೊಂದು ವಾರದಲ್ಲಿ ಅಕ್ಕಿಯ ಬೆಲೆ ಕಿಲೋ ಒಂದಕ್ಕೆ ಐದರಿಂದ ಹತ್ತು ರೂ.ಗಳ ವರೆಗೆ ಏರಿಕೆಯಾಗಿದೆ. ಕಜೆ ಅಕ್ಕಿಗೆ 6 ರಿಂದ ಎಂಟು ರೂ.ಗಳ ವರೆಗೆ ಏರಿಕೆಯಾಗಿದೆ. 32 ರೂ.ಗೆ ಲಭಿಸುತ್ತಿದ್ದ ಕಜೆ ಅಕ್ಕಿಗೆ ಈಗ 38 ರೂ. ಆಗಿದೆ. 30 ರೂ.ವಿನ ಅಕ್ಕಿಗೆ 36 ರೂ., 27.50 ರೂ.ವಿನ ಅಕ್ಕಿಗೆ 30 ರೂ.ಗಳಷ್ಟು ಹೆಚ್ಚಳಗೊಂಡಿದೆ. ವಿವಾಹಾದಿ ಸಮಾರಂಭಗಳಿಗೆ ಬಳಸುವ ಶ|ಇವಶಕ್ತಿ ಬ್ರಾಂಡ್ ಅಕ್ಕಿ ದರ 36 ರೂ.ಯಿಂದ 42 ರೂ.ಗಳಿಗೆ ಏರಿಕೆಯಾಗಿದೆ.
30 ರೂ.ಗಳ ಪೊನ್ನಿ ಅಕ್ಕಿಯ ವಿವಿಧ ಅಕ್ಕಿಗಳಿಗೆ 38.50 ರೂ.ಗಳ ವರೆಗೆ ಬೆಲೆ ಹೆಚ್ಚಳಗೊಂಡಿದೆ. ಚಿಲ್ಲರೆ ಬೆಲೆ ಕಿಲೋ ಒಂದಕ್ಕೆ 5 ರೂ.ವರೆಗೆ ಏರಿಕೆಯಾಗಿದೆ. ಆ|ಂಧ್ರದಿಂದ ಬರುವ ಜಯ, ಪೊನ್ನಿ, ತಮಿಳುನಾಡಿನಿಂದ ಬರುವ ಕುರುವ ಪೊನ್ನಿ ಈ ಮೊದಲಾದ ಅಕ್ಕಿಗಳ ಬೆಲೆ ಎರಡು ವಾರಗಳಲ್ಲಿ ತಲಾ 3 ರೂ. ಹೆಚ್ಚಳ ಉಂಟಾಗಿದೆ. ಅಕ್ಕಿ ಲಭ್ಯತೆಯ ಕೊರತೆ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದ್ದು, ಫೆಬ್ರವರಿ ವೇಳೆಗೆ ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ದಕ್ಷಿಣ ಭಾರತದಾತ್ಯಂತ ಸುರಿದ ಭಾರೀ ಮಳೆ, ನೆರೆಗಳಿಂದ ಉತ್ಪಾದನೆಯ ಕುಸಿತಕ್ಕೆ ಕಾರಣವಾಗಿ ಬೆಲೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ.
ಬಂಗಾಳದಿಂದ ಆಮದಾಗುವ ಕಯಮೆ ಅಕ್ಕಿಯ ಬೆಲೆಯಲ್ಲೂ ಕಿಲೋಗೆ 8 ರೂ.ಗಳ ವರೆಗೆ ಹೆಚ್ಚಳವಾಗಿದೆ. ಗಲ್ಪ್ ರಾಷ್ಟ್ರಗಳಿಗೆ ರಪ್ತು ಹೆಚ್ಚಳ ಹಾಗೂ ಕಳೆದ ಎರಡು ವರ್ಷಗಳಲ್ಲಿ ಎದುರಿಸಿದ ನಷ್ಟ(ಕೋವಿಡ್ ಕಾರಣ) ಭರ್ತಿಮಾಡಲು ಕಂಪೆನಿಗಳು ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸುತ್ತಾರೆ. ಪಾಲಕ್ಕಾಡಿನ ಮಟ್ಟ ಅಕ್ಕಿ ಹೊರತುಪಡಿಸಿ ಉಳಿದೆಲ್ಲಾ ವರ್ಗಗಳ ಅಕ್ಕಿ ದರ ಇತ್ತೀಚೆಗೆ ಭಾರೀ ಹೆಚ್ಚಳಗೊಂಡಿದೆ. ಕರ್ನಾಟಕದಿಂದ ಬರುವ ಮಟ್ಟ ಅಕ್ಕಿಯ ಬೆಲೆ 33 ರಿಂದ 48 ರೂ.ಗಳಿಗೆ ತೀವ್ರ ಏರಿಕೆ ಕಂಡಿದೆ.
ದಕ್ಷಿಣ ಭಾರತದ ಗದ್ದೆಗಳಲ್ಲಿ ಲಕ್ಷಾಂತರ ಹೆಕ್ಟೇರ್ ಭತ್ತದ ಕೃಷಿ ನಶಿಸಿದೆ. ಉತ್ಪಾದನೆಯ ಕೊರತೆಯ ಜೊತೆಗೆ ಇಂಧನ ಬೆಲೆ ಏರಿಕೆ ಅಕ್ಕಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೇರಳದಲ್ಲಿ ಪ್ರತಿತಿಂಗಳು 3.3 ಲಕ್ಷ ಟನ್ ಅಕ್ಕಿ ಮಾರಾಟವಾಗುತ್ತದೆ. ಈ ಪೈಕಿ 1.83 ಲಕ್ಷ ಟನ್ ಬಿಳಿ ಅಕ್ಕಿ ಹಾಗೂ 1.5 ಲಕ್ಷ ಟನ್ ಕುಸಲಕ್ಕಿ ಆಗಿದೆ.