ಕುಂಬಳೆ : ಯಕ್ಷಗಾನ ಕಲಾ ಸಂಸ್ಕøತಿ ಗೆ ಸೀಮಿತವಾಗಿ ಪಾರ್ತಿಸುಬ್ಬನ ನೆಲ ಕುಂಬಳೆಯಿಂದ ಹಿರಿಯ ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಸಾರಥ್ಯದಲ್ಲಿ ಪ್ರಕಟಣೆ ಆರಂಭಿಸಿ ಇಂದೀಗ ಕರುನಾಡಿನೆಲ್ಲಡೆ ಜನಪ್ರಿಯವಾಗಿರುವ "ಕಣಿಪುರ" ಯಕ್ಷಗಾನ - ಸಂಸ್ಕೃತಿ ಮಾಸ ಪತ್ರಿಕೆ ಹತ್ತರ ಹರೆಯಕ್ಕೆ ಕಾಲೂರಿದೆ.
ಇದರನ್ವಯ ಮುಂಬರುವ 2022ರ ಡಿಸೆಂಬರ್ ತನಕ 'ಕಣಿಪುರ'ಕ್ಕೆ ಹತ್ತರ ಹಬ್ಬ. ಹತ್ತರ ಹಬ್ಬದ ಮೊದಲ ಸಂಚಿಕೆಯನ್ನು ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಡಿ. 10ರಂದು ಶ್ರೀ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ರಾಜೋಚಿತ ಗೌರವಗಳೊಂದಿಗೆ ಬಿಡುಗಡೆ ಮಾಡಲಾಯಿತು.
ಭಾರತೀಯ ರಂಗಭೂಮಿಯಲ್ಲೇ ಅತ್ಯಪೂರ್ವ ಸಾಧನೆ ಮೆರೆದ 70ವರ್ಷಗಳ ನಿರಂತರ ತಿರುಗಾಟ ನಡೆಸಿದ ಸೂರಿಕುಮೇರು ಕೆ. ಗೋವಿಂದ ಭಟ್ಟರ "ಎಪ್ಪತ್ತು ತಿರುಗಾಟಗಳು" ಮಾಸಿಕದ ಕವರ್ ಸ್ಟೋರಿ. ಈ ಹಿನ್ನೆಲೆಯಲ್ಲಿ 84ರ ಹರೆಯದ ಭಾರತೀಯ ರಂಗವಿಸ್ಮಯ ಕೆ. ಗೋವಿಂದ ಭಟ್ಟರಿಗೆ ಮೊದಲ ಸಂಚಿಕೆಯನ್ನು ಹಸ್ತಾಂತರಿಸಿ ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಸಂಚಿಕೆ ಬಿಡುಗಡೆಗೊಳಿಸಿದರು. ಪತ್ರಿಕೆ ಮೇಳವೊಂದರ ಸೇವೆಯಾಟದ ರಂಗಸ್ಥಳದಲ್ಲಿ ದಶಮಾನದ ಸಂಚಿಕೆ ಯ ಮೂಲಕ ಪ್ರಕಟಗೊಂಡದ್ದು ಇದೇ ಮೊದಲು.
ಕಲಾಪೆÇೀಷಕ ಡಾ. ಟಿ. ಶ್ಯಾಂಭಟ್, ಹನುಮಗಿರಿ ಕ್ಷೇತ್ರದ ನನ್ಯ ಅಚ್ಯುತ ಮೂಡಿತ್ತಾಯ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಕಣಿಪುರ ಸಂಪಾದಕ, ಪ್ರಕಾಶಕ ಎಂ. ನಾ. ಚಂಬಲ್ತಿಮಾರ್ ಉಪಸ್ಥಿತರಿದ್ದರು.
ದಶಮಾನೋತ್ಸವವನ್ನು ವೈವಿಧ್ಯ ದೃಷ್ಟಿಕೋನಗಳಿಂದ ಓದುಗದ ಓಣಿಗೆ ಸಂಪಾದಕರ ನಡಿಗೆ ಮತ್ತು ಶಾಲಾ, ಕಾಲೇಜು, ದೇವಸ್ಥಾನಗಳಿಗೆ ಪ್ರಾಯೋಜಕತ್ವದ ಓದುಗ ಅಭಿಯಾನ ಎಂಬ ಆಶಯದಿಂದ ನಡೆಸಲಾಗುವುದೆಂದು ಸಂಪಾದಕರು ಪ್ರಕಟಿಸಿದ್ದಾರೆ. ಸದ್ಯ ವರ್ತಮಾನದಲ್ಲಿ ಕಾಸರಗೋಡಿನ ಕನ್ನಡ ಪತ್ರಿಕೋದ್ಯಮದಲ್ಲಿ ಕನ್ನಡಿಗ ಪತ್ರಕರ್ತನೊಬ್ಬನ ಏಕಾಂಗಿ ಸಾರಥ್ಯದಲ್ಲಿ ಸದಭಿರುಚಿಯ, ಪತ್ರಿಕೆಯೊಂದು ಕಾಸರಗೋಡಿನ ಹೊರಗೆ ಕರುನಾಡಿನ ಅತ್ಯಂತ ಜನಪ್ರಿಯಗೊಂಡು ಅಸಂಖ್ಯ ಓದುಗರನ್ನು ಹೊಂದಿ ಜನಪ್ರಿಯವಾಗಿ ದಶಮಾನೋತ್ಸವ ಆಚರಿಸುವುದು ಇದೇ ಮೊದಲು.