ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸುವ ಎರಡು ಮಸೂದೆಗಳನ್ನು ವಿರೋಧಿಸಿ ವಿರೋಧ ಪಕ್ಷಗಳು ಸಂಸತ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.
ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆಯನ್ನೂ ಈ ಹಿಂದೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ಮಂಡಿಸಲಾಗಿತ್ತು. ಇವುಗಳಿಗೆ ಅಸಮ್ಮತಿ ಸೂಚಿಸಿ ಶಾಸನಬದ್ಧ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಇದು 'ನಿರಂಕುಶ' ಮತ್ತು 'ಅಧಿಕಾರದ ವ್ಯಾಮೋಹ'ದಿಂದ ಕೂಡಿದ ನಡೆ ಎಂದು ಹೇಳಿದ್ದಾರೆ.
ಕಳೆದ ಏಳೂವರೆ ವರ್ಷಗಳಲ್ಲಿ ಸರ್ಕಾರವು ಸಾಂವಿಧಾನಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದೆ ಎಂದೂ ಹೇಳಿದ್ದಾರೆ.