ಕುನೂರು: ಕುನ್ನೂರ್ ಸಮೀಪ ಡಿ.08 ರಂದು ನಡೆದ ಸೇನಾ ಹೆಲಿಕಾಫ್ಟರ್ ಪತನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟೀ ಎಸ್ಟೇಟ್ ಪ್ರದೇಶದಲ್ಲಿ ಹೆಲಿಕಾಫ್ಟರ್ ಪತನಗೊಂಡಿದ್ದು ಸ್ಥಳೀಯರಿಗೆ ಏಕಾಏಕಿ ಭಾರಿ ಸದ್ದು ಕೇಳಿಸಿದ್ದು, ದಟ್ಟವಾದ ಹೊಗೆ ಆವರಿಸಿದ್ದು ಕಂಡುಬಂದಿದೆ.
"ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, "ಮಧ್ಯಾಹ್ನದ ಸಮಯದಲ್ಲಿ ಭಾರಿ ಸದ್ದು ಕೇಳಿಸಿತು. ನಾನು ನನ್ನ ಮನೆಯಿಂದ ಹೊರಬಂದೆ ಆಗ ಹೆಲಿಕಾಫ್ಟರ್ ಮರದ ರೆಂಬೆಗಳಿಗೆ ತಗುಲಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತ್ತು. ಕೆಲವರು ಚೀರುತ್ತಿದ್ದ ಸದ್ದೂ ಕೇಳಿಸುತ್ತಿತ್ತು" ಎಂದು ಪ್ರತ್ಯಕ್ಷವಾಗಿ ಘಟನೆಯನ್ನು ನೋಡಿದ ಪಿ ಚಂಧಿರಕುಮಾರ್ ಹೇಳಿದ್ದಾರೆ.
ಈ ಘಟನೆಯನ್ನು ಕಂಡು ಗಾಬರಿಯಾದ ಚಂದಿರಕುಮಾರ್ ತಕ್ಷಣವೇ ನೆರೆಯ ಮನೆಯ ಶಿವಕುಮಾರ್ ಅವರನ್ನು ಕರೆದಿದ್ದಾರೆ, ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳದ ಬಳಿಯೇ ಇದ್ದ 8 ಮಂದಿ ಅಪಘಾತಕ್ಕೀಡಾದ ಸ್ಥಳಕ್ಕೆ ಧಾವಿಸಿದರು.
ದಟ್ಟ ಹೊಗೆ ಆವರಿಸಿದ್ದರಿಂದ ಹೆಚ್ಚು ಕಾಣಿಸಲಿಲ್ಲ. ಅಲ್ಲಿನ ಭೂಪ್ರದೇಶದ ಪರಿಸ್ಥಿತಿಯಿಂದಾಗಿ ಘಟನೆ ನಡೆದ ಸ್ಥಳಕ್ಕೆ ತೆರಳುವುದಕ್ಕೆ ಕಷ್ಟವಾಯಿತು. ಹೆಲಿಕಾಫ್ಟರ್ ನ ಹೊರಗೆ ಇಬ್ಬರು ವ್ಯಕ್ತಿಗಳು ಬಿದ್ದಿದ್ದನ್ನು ಕಂಡೆ, ಹೆಲಿಕಾಫ್ಟರ್ ಪತನಗೊಳ್ಳುತ್ತದೆ ಎಂಬುದನ್ನು ಅರಿತ ಅವರು ಅಲ್ಲಿಂದ ಜಿಗಿದಿದ್ದರು ಎಂದೆನಿಸುತ್ತದೆ. ಅವರ ಬಟ್ಟೆಗಳು ಸುಟ್ಟುಹೋಗಿದ್ದವು, ಅವರ ಮುಖಗಳು ಗುರುತು ಸಿಗುತ್ತಿರಲಿಲ್ಲ ಎಂದು ಎ ಶಿವಕುಮಾರ್ (45) ಎಂಬ ಮತ್ತೋರ್ವ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಗಾಯಾಳುಗಳೊಂದಿಗೆ ಮಾತನಾಡುತ್ತಾ ಸಹಾಯ ಮಾಡುವುದಾಗಿ ಹೇಳಿದೆವು ಆಗ ಅವರಲ್ಲಿ ಓರ್ವರು ನೀರಿಗಾಗಿ ಕೇಳುತ್ತಿದ್ದರು. ಆ ನಂತರ ಸುದ್ದಿ ನೋಡಿದಾಗಷ್ಟೇ ನಮಗೆ ಆ ಹೆಲಿಕಾಫ್ಟರ್ ನಲ್ಲಿ ಹಿರಿಯ ಸೇನಾಧಿಕಾರಿಗಳೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಯಿತು ಎಂದು ಮಾಹಿತಿ ನೀಡಿರುವ ಶಿವಕುಮಾರ್, ತಾವು ಗಾಯಾಳುಗಳನ್ನು ಮುಖ್ಯರಸ್ತೆಗೆ ಕರೆದೊಯ್ಯಲು ಸಹಾಯ ಮಾಡಿದೆವು. ತಕ್ಷಣವೇ ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಸಿಬ್ಬಂದಿಗಳು ಆಗಮಿಸಿದರು.
ಮತ್ತೋರ್ವ ನೀಡಿರುವ ಮಾಹಿತಿಯ ಪ್ರಕಾರ ಹೆಲಿಕಾಫ್ಟರ್ ಪತನಗೊಂಡಾಗ ಸಿಲಿಂಡರ್ ಸ್ಫೋಟದಂತಹ ಶಬ್ದ ಕೇಳಿಸಿತು. ಅಂತೆಯೇ ನನ್ನ ಮನೆಯಿಂದ ಕೇವಲ 2 ನಿಮಿಷಗಳ ನಡಿಗೆಯ ದೂರದಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಮೂರು ಮನೆಗಳಲ್ಲಿ ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.