ಚೆನ್ನೈ: ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿರುವ ಗ್ರಾಮಸ್ಥರು ಹಾಗೂ ಎಸ್ಟೇಟ್ ಕಾರ್ಮಿಕರನ್ನು ತಮಿಳುನಾಡು ಪೊಲೀಸ್ ಶುಕ್ರವಾರ ಅಭಿನಂದಿಸಿದೆ.
ಚೆನ್ನೈ: ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿರುವ ಗ್ರಾಮಸ್ಥರು ಹಾಗೂ ಎಸ್ಟೇಟ್ ಕಾರ್ಮಿಕರನ್ನು ತಮಿಳುನಾಡು ಪೊಲೀಸ್ ಶುಕ್ರವಾರ ಅಭಿನಂದಿಸಿದೆ.
ಬುಧವಾರ ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನಗೊಂಡು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು.
ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವಿಮಾನ ಪತನಗೊಂಡಾಗ ಮೊದಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಗ್ರಾಮಸ್ಥರು, ಹೆಲಿಕಾಪ್ಟರ್‌ಗೆ ಹೊತ್ತಿದ ಬೆಂಕಿ ನಂದಿಸಲು ಹಾಗೂ ಗಾಯಾಳುಗಳನ್ನು ಹತ್ತಿರದ ವೆಲ್ಲಿಂಗ್ಟನ್ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಪೊಲೀಸ್ ಡಿಜಿಪಿ ಸಿ. ಶೈಲೇಂದ್ರ ಬಾಬು, 'ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಅಗತ್ಯ ಸೇವೆ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ ಎಡಿಎಸ್‌ಪಿ ಮುತ್ತುಮಾಣಿಕ್ಯ ನೇತೃತ್ವದಲ್ಲಿ ತಮಿಳುನಾಡು ರಾಜ್ಯ ಸರ್ಕಾರದ ವಿಶೇಷ ತಂಡ ಕೂಡ ತನಿಖೆಯನ್ನು ನಡೆಸುತ್ತಿದೆ. ಅಲ್ಲದೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಕಲೆ ಹಾಕಿದ್ದಾರೆ.
'ನಾವು ಈಗಾಗಲೇ 25 ಜನರ ಹೇಳಿಕೆಗಳನ್ನು ಕಲೆ ಹಾಕಿದ್ದೇವೆ. ಇವುಗಳನ್ನು ಏರ್‌ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವ ವಹಿಸುವ ತನಿಖಾ ತಂಡಕ್ಕೆ ಹಸ್ತಾಂತರಿಸಲಿದ್ದೇವೆ' ಎಂದು ಡಿಜಿಪಿ ತಿಳಿಸಿದ್ದಾರೆ.