ಚೆನ್ನೈ: ತಮಿಳುನಾಡಿನ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿ ಚೆನ್ನೈನ ಶಾಲೆಯೊಂದರಲ್ಲಿ 11ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ವಾರ ಚೆನ್ನೈನ ಮಂಗಾಡುವಿನ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಆಕೆಯ ಆತ್ಮಹತ್ಯೆ ಪತ್ರ ಶನಿವಾರ ಪತ್ತೆಯಾಗಿದೆ. 'ಲೈಂಗಿಕ ಕಿರುಕುಳವನ್ನು ನಿಲ್ಲಿಸಿ' ಎಂಬ ಶೀರ್ಷಿಕೆಯಡಿಯಲ್ಲಿ, ಲೈಂಗಿಕ ಕಿರುಕುಳದಿಂದ ಉಂಟಾದ ಮಾನಸಿಕ ಹಿಂಸೆಯ ಕುರಿತು ಪತ್ರದಲ್ಲಿ ಬರೆದಿದ್ದಾಳೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ, ಗಂಡು ಮಕ್ಕಳು ಹೇಗೆ ಗೌರವ ನೀಡಬೇಕು ಎಂಬುದನ್ನು ತಂದೆ-ತಾಯಿ ಅವರ ಗಂಡು ಮಕ್ಕಳಿಗೆ ಕಲಿಸಿ ಕೊಡಿ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ.
'ಪ್ರತಿಯೊಬ್ಬ ಪೋಷಕರು ತಮ್ಮ ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಸಬೇಕು. ಸಂಬಂಧಿಕರು ಅಥವಾ ಶಿಕ್ಷಕರನ್ನು ನಂಬಬೇಡಿ. ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಸುರಕ್ಷಿತ ಸ್ಥಳ' ಎಂದು ಪತ್ರವನ್ನು ಬಾಲಕಿ ಬರೆದಿದ್ದಾಳೆ.
ಶಾಲೆಗಳು ಅಥವಾ ಸಂಬಂಧಿಕರ ಸ್ಥಳ ಸುರಕ್ಷಿತವಾಗಿಲ್ಲ ಎಂದು ಆಕೆ ಪತ್ರದಲ್ಲಿ ಹೇಳಿದ್ದು. ಆಕೆಯ ಹಿಂದಿನ ಶಾಲೆಯಲ್ಲೂ ಯಾರೋ ಕಿರುಕುಳ ನೀಡಿದ್ದರು ಎಂದು ಆಕೆಯ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಶಾಲೆಯ ಬದಲಾವಣೆಯು ಆಕೆಯ ಕಿರುಕುಳವನ್ನು ಕೊನೆಗೊಳಿಸಲಿಲ್ಲ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಪತ್ರದಲ್ಲಿ ಆಕೆ ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಮಲಗಿದ್ರೆ ಕೆಟ್ಟ ಕನಸು ಬೀಳುತ್ತದೆ. ರಾತ್ರಿ ನಿದ್ರೆ ಮಾಡಲು ಆಗುತ್ತಿರಲಿಲ್ಲ ಎಂದು ಬರೆದಿದ್ದಾಳೆ.
ಪ್ರಕರಣದ ತನಿಖೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆಕೆಯ ಮೊಬೈಲ್ ಕರೆ ವಿವರದ ದಾಖಲೆಯನ್ನು ಆಧರಿಸಿ, ಆಕೆಗೆ ಆಗಾಗ್ಗೆ ಕರೆ ಮಾಡಿದವರ ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ.