ಮಧುರೈ: ಶೀರ್ಷಿಕೆ ಓದಿದ ಓದುಗರಿಗೆ ಕೋರ್ಟ್ ಯಾಕೆ ಹೀಗೆ ಹೇಳಿತು ನಗುವುದನ್ನು ಮೂಲಭೂತ ಹಕ್ಕುಗಳಡಿ ತರಲು ಕೋರ್ಟ್ ನಿಜವಾಗಿಯೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ.
ಆಗಿದ್ದೇನು ಅಂದರೆ, ಮದ್ರಾಸ್ ಹೈಕೋರ್ಟ್ ಯಾವುದರ ಬಗ್ಗೆ ನಗಬೇಕು, ತಮಾಷೆ ಮಾಡಬಾರದ ವಿಷಯಗಳು ಯಾವುದು ಎಂಬ ಬಗ್ಗೆಯೇ ವಿಸ್ತೃತವಾದ ಅಭಿಪ್ರಾಯವನ್ನು ಮಂಡಿಸಿದೆ. ಅಷ್ಟೇನು ಗಂಭೀರವಲ್ಲದ ವಿಷಯದ ಬಗ್ಗೆ ತಮಾಷೆ ಮಾಡಿದ್ದ ವ್ಯಕ್ತಿಯ ವಿರುದ್ಧ ಕೈಗೆ ಸಿಕ್ಕ ಸೆಕ್ಷನ್ ಗಳನ್ನೆಲ್ಲಾ ಹಾಕಿ ವ್ಯಕ್ತಿಯೋರ್ವನ ವಿರುದ್ಧ ಕೇಸ್ ಜಡಿದಿದ್ದ ಪೊಲೀಸರಿಗೆ ಇದು ಪಾಠವೂ ಹೌದಾಗಿದೆ.
ತಮಿಳುನಾಡಿನ ಸಿಪಿಐ(ಎಂಎಲ್) ನ ಪದಾಧಿಕಾರಿಯೂ ಆಗಿರುವ ಮಥಿವಣ್ಣನ್ ಎಂಬುವವರು ಫೇಸ್ ಬುಕ್ ನಲ್ಲಿ ಶೂಟಿಂಗ್ ಅಭ್ಯಾಸಕ್ಕಾಗಿ ಸಿರುಮಲೈ ಗೆ ಪ್ರವಾಸ ಎಂದು ಫೋಟೋ ಸಹಿತ ಲಘು ಧಾಟಿಯಲ್ಲಿ ಪೋಸ್ಟ್ ಅಪ್ಡೇಟ್ ಮಾಡಿದ್ದರು. ಪೊಲೀಸರು ಈ ಪೋಸ್ಟ್ ನ್ನು ನೋಡಿ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದ ಶಸ್ತ್ರಾಸ್ತ ಸಂಗ್ರಹಣೆ, ಸೆಕ್ಷನ್ 507 ರ ಪ್ರಕಾರ ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಕ್ರಿಮಿನಲ್ ಆರೋಪದಡಿ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಫ್ಐಆರ್ ನ್ನೂ ಸಿದ್ಧಪಡಿಸಿದ್ದರು.
ತಮ್ಮ ವಿರುದ್ಧದ ಎಫ್ಐಆರ್ ನ್ನು ರದ್ದುಗೊಳಿಸೇಕೆಂದು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನಗು, ತಮಾಷೆಯ ವ್ಯಾಪ್ತಿಗಳ ಪಾಠವನ್ನು ಮಾಡಿದ್ದು ವ್ಯಕ್ತಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ನ್ನೂ ರದ್ದುಗೊಳಿಸಿದೆ.
ಭಾರತದಲ್ಲಿ ಉತ್ತರಪ್ರದೇಶದ ವಾರಣಾಸಿಯಿಂದ ತಮಿಳುನಾಡಿನ ವಡಿಪಟ್ಟಿವರೆಗೂ ಹಲವು ಗಂಭೀರ ವಿಷಯಗಳಿವೆ. ಅವುಗಳೆಡೆಗೆ ತಮಾಷೆ ಮಾಡಬೇಡಿ. ಆದರೆ ದೇಶಾದ್ಯಂತ ಇರುವುದು ಒಂದೇ ಗಹನ, ಗಂಭೀರ ವಿಷಯ ಅದು ರಾಷ್ಟ್ರೀಯ ಭದ್ರತೆ ಎಂದು ಹೇಳಿದೆ.
ತಮಾಷೆ ಮಾಡುವುದರ ಬಗ್ಗೆಯೂ ಕೋರ್ಟ್ ಹೇಳಿದ್ದು, ಬಹುಶಃ ಸಂವಿಧಾನದಲ್ಲಿ ನಗುವುದನ್ನು ಹಕ್ಕನ್ನಾಗಿ ಮಾಡಲು ತಿದ್ದುಪಡಿ ಬೇಕಾಗುವುದೇನೋ ಎಂದು ಲಘು ಧಾಟಿಯಲ್ಲೇ ಹೇಳಿದೆ.
ವಿಚಾರಣೆ ವೇಳೆ ನ್ಯಾ. ಜಿ.ಆರ್ ಸ್ವಾಮಿನಾಥನ್ ಹೆಸರಾಂತ ವ್ಯಂಗ್ಯಚಿತ್ರಕಾರರು, ಪತ್ರಕರ್ತರು, ವಿಡಂಬನಕಾರರನ್ನು ಉಲ್ಲೇಖಿಸಿದ್ದು, ಅವರೇನಾದರೂ ನ್ಯಾಯದಾನ ಮಾಡಿದಿದ್ದರೆ ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಹಾಗೂ ದೇಶದ ಸಮಗ್ರತೆ, ಸಾರ್ವಭೌಮತ್ವಗಳನ್ನು ರಕ್ಷಿಸಲು ನೀಡಿರುವ ಸಂವಿಧಾನದ ಆರ್ಟಿಕಲ್ 51-ಎ ಗೆ ಮಹತ್ವದ ತಿದ್ದುಪಡಿ ತಂದುಬಿಡುತ್ತಿದ್ದರು. ನ್ಯಾಯದಾನವನ್ನು ಬರೆಯುತ್ತಿದ್ದ ಆ ಕಾಲ್ಪನಿಕ ವ್ಯಕ್ತಿ ಮೂಲಭೂತ ಹಕ್ಕುಗಳಿಗೆ ಮತ್ತೊಂದನ್ನು ಸೇರಿಸಿ ನಗುವುದನ್ನೂ ಮೂಲಭೂತ ಹಕ್ಕನ್ನಾಗಿಸುತ್ತಿದ್ದರು ಎಂದು ತಮಾಷೆಯಾಗಿರುವ ಸಂಬಂಧಿತ ಹಕ್ಕನ್ನು ಆರ್ಟಿಕಲ್ 19 (1)(ಎ) ನಲ್ಲಿ ಕಾಣಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ತಮಾಷೆಯಾಗಿರುವುದು ಬೇರೆ, ಮತ್ತೊಬ್ಬರನ್ನು ತಮಾಷೆ ಮಾಡುವುದು ಬೇರೆ, ಯಾವುದರ ಬಗ್ಗೆ ನಗುತ್ತಿದ್ದೀರಿ? ಎಂಬುದು ಪ್ರಮುಖ, ಗಂಭೀರವಾದ ಪ್ರಶ್ನೆಯಾಗುತ್ತದೆ. ಏಕೆಂದರೆ ಭಾರತದಲ್ಲಿ ಉತ್ತರ ಪ್ರದೇಶದ ವಾರಾಣಸಿಯಿಂದ ಹಿಡಿದು ವಡಿಪಟ್ಟಿವರೆಗೂ ಹಲವು ಗಹನ ವಿಷಯಗಳಿವೆ. ಅಂಥಹ ವಿಷಯಗಳೆಡೆಗೆ ತಮಾಷೆ ಮಾಡಬಾರದು, ಆದರೆ ಇಂತಹ ಗಹನವಾದ ಅಂಶಗಳು ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ಆಗಿರುವುದಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಅದು ಬದಲಾಗುತ್ತದೆ.
ಒಂದು ಗೋವು ಯೋಗಿ ಇರುವ ಪ್ರದೇಶದಲ್ಲಿ ಕೃಶವಾಗಿ, ಬಡಕಲಾಗಿದ್ದರೂ ಅದು ಪೂಜನೀಯ, ಪವಿತ್ರ ಎನಿಸಿಕೊಳ್ಳುತ್ತದೆ. ಪಶ್ಚಿಮ ಬಂಗಾಳದಲ್ಲಿ ಠಾಗೂರ್ ಅವರು ಅತ್ಯಂತ ಪವಿತ್ರ, ಪೂಜನೀಯ ವ್ಯಕ್ತಿಯಾಗಿದ್ದರು ಖುಷ್ವಂತ್ ಸಿಂಗ್ ಬೆಲೆ ತೆತ್ತು ಇದಕ್ಕೆ ಸಂಬಂಧಿಸಿದ ಪಾಠ ಕಲಿತರು. ನಮ್ಮದೇ ತಮಿಳುನಾಡಿನಲ್ಲಿ ಪೆರಿಯಾರ್ ಶ್ರೀ ಇ.ವಿ ರಾಮಸ್ವಾಮಿ ಅವರು ಅತ್ಯಂತ ಪೂಜನೀಯ, ಗೌರವದ ಸ್ಥಾನದಲ್ಲಿದ್ದಾರೆ.
ಕೇರಳದಲ್ಲಿ ಮಾರ್ಕ್ಸ್, ಲೆನಿನ್ ಗಳು ಟೀಕೆ, ತಮಾಷೆಗಳಿಗೂ ಮೀರಿದವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಾವರ್ಕರ್, ಶಿವಾಜಿ ಇಂಥಹದ್ದೇ ಸ್ಥಾನದಲ್ಲಿದ್ದಾರೆ. ಆದರೆ ದೇಶಾದ್ಯಂತ ತಮಾಷೆ, ಟೀಕೆಗಳನ್ನು ಮಾಡಬಾರದ ಒಂದೇ ಒಂದು ಅಂಶವಿದೆ ಅದು ರಾಷ್ಟ್ರೀಯ ಭದ್ರತೆ ಎಂದು ನ್ಯಾಯಾಧೀಶರು ಇದೇ ವೇಳೆ ಹೇಳಿದ್ದಾರೆ.
ತಮಿಳುನಾಡಿನ ಸಿಪಿಐ(ಎಂಎಲ್) ನ ಪದಾಧಿಕಾರಿಯೂ ಆಗಿರುವ ಮಥಿವಣ್ಣನ್ ದೇಶಿ ಚೆಗುವೆರಾ ಎಂದೂ ಬಣ್ಣಿಸಬಹುದು, ನಿಜವಾದ ಅಥವಾ ಕೇವಲ ಬಣ್ಣಿಸುವುದಕ್ಕಾಗಿ ಕ್ರಾಂತಿಕಾರಿಗಳೆನಿಸಿಕೊಂಡವರನ್ನು ಸಾಮಾನ್ಯವಾಗಿ ಹಾಸ್ಯದಿಂದ ದೂರವಿಟ್ಟು ನೋಡುತ್ತಾರೆ. ಆದರೆ ಇದಕ್ಕೆ ಅಪವಾದವೆಂಬಂತೆ ಈ ವ್ಯಕ್ತಿ ತಮಾಷೆಯಾಗಿರಲು ಯತ್ನಿಸಿದ್ದಾರೆ. ಇದು ಅವರ ಪ್ರಯತ್ನ ಇರಬಹುದು ಬಹುಶಃ ಎಂದು ಕೋರ್ಟ್ ಹೇಳಿದೆ.