ತಿರುವನಂತಪುರ: ಮಕರ ಬೆಳಕು ಉತ್ಸವದ ಬಳಿಕ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ಹೆಚ್ಚಿನ ಚರ್ಚೆ ಬಳಿಕ ಪ್ರಯಾಣ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಆದರೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಜಸ್ಟಿಸ್ ರಾಮಚಂದ್ರನ್ ಸಮಿತಿಯೊಂದಿಗೆ ದರ ಏರಿಕೆ ಕುರಿತು ನಿನ್ನೆ ನಡೆದ ಸುಧೀರ್ಘ ಚರ್ಚೆಯ ಬಳಿಕ ಸಚಿವರ ಪ್ರತಿಕ್ರಿಯೆ ಹೊರಬಿದ್ದಿದೆ.
ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. ಪ್ರಸ್ತುತ ಯಾವುದೇ ಒಮ್ಮತದ ಮಾನದಂಡಗಳಿಲ್ಲ. ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಉಚಿತ ರಿಯಾಯಿತಿ ನೀಡಲಾಗುವುದು ಎಂದು ಸಚಿವರು ಹೇಳಿದರು. ಪಡಿತರ ಚೀಟಿ ಮಾನದಂಡದ ಆಧಾರದ ಮೇಲೆ ರಿಯಾಯಿತಿ ದರವನ್ನು ಪುನರ್ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.
ರಾತ್ರಿ ಪ್ರಯಾಣದ ದರವನ್ನು ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಹಾಗೂ ಬಸ್ ಮಾಲೀಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರಾತ್ರಿ ಪ್ರಯಾಣಕ್ಕೆ ಸಿಬ್ಬಂದಿ ಕೊರತೆಯಿಂದ ಸೇವೆಗಳನ್ನು ನಿಲ್ಲಿಸುವುದರಿಂದ ಆಗುವ ಅನಾನುಕೂಲವನ್ನು ನಿವಾರಿಸಲು ರಾತ್ರಿ ಸೇವೆಗಳ ದರವನ್ನು ಹೆಚ್ಚಿಸಲಾಗುವ ಚಿಂತನೆ ಇದೆ. ಬಸ್ ಮಾಲೀಕರ ನಷ್ಟವನ್ನು ನಿವಾರಿಸುವ ಗುರಿ ಹೊಂದಲಾಗಿದ್ದು, ಎಲ್ಲ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿರುವರು.