ತಿರುವನಂತಪುರಂ; ಭಾರತದಲ್ಲಿ ಕೋವಿಡ್-19 ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿದ್ದು, ಇದೀಗ ಕೇರಳದಲ್ಲಿ ಮೊದಲ ಪ್ರಕರಣ ದೃಢಪಟ್ಟಿದೆ. ಎರ್ನಾಕುಳಂ ನಿವಾಸಿಯೊಬ್ಬರಿಗೆ ರೋಗ ಇರುವುದು ಪತ್ತೆಯಾಗಿದೆ. ಅವರು ಯುಕೆಯಿಂದ ರಾಜ್ಯಕ್ಕೆ ಆಗಮಿಸಿರುವವರು. ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ಆ ವ್ಯಕ್ತಿಯ ಪತ್ನಿ ಮತ್ತು ತಾಯಿಗೂ ಕೊರೊನಾ ಪಾಸಿಟಿವ್ ಆಗಿದೆ.
ಯುಕೆಯಿಂದ ಅಬುಧಾಬಿಗೆ ಆಗಮಿಸಿದ ಅವರು ಆರು ದಿನಗಳ ಬಳಿಕ ಕೊಚ್ಚಿಗೆ ಬಂದರು. ಮೊದಲ ಪರೀಕ್ಷೆಯು ನೆಗೆಟಿವ್ ಆಗಿತ್ತು, ಆದರೆ ಎಂಟನೇ ದಿನ ನಡೆಸಿದ ಪರೀಕ್ಷೆಯಲ್ಲಿ ಹೊಸ ರೂಪಾಂತರ ದೃಢಪಡಿಸಿತು. ಅವರನ್ನು ವಿಶೇಷ ವೀಕ್ಷಣಾ ವಾರ್ಡ್‍ಗೆ ವರ್ಗಾಯಿಸಲಾಗಿದೆ.
ವಿಮಾನದಲ್ಲಿದ್ದ ಎಲ್ಲಾ 149 ಜನರಿಗೆ ಸೂಚನೆ ನೀಡಲಾಗಿದೆ ಮತ್ತು ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಆರೋಗ್ಯ ಸಚಿವರು ಹೇಳಿದರು. ಇದರೊಂದಿಗೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 38 ಕ್ಕೆ ಏರಿದೆ.