ಲಖನೌ: ಪ್ರಮುಖ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಪ್ರಮುಖ ಮುಸ್ಲಿಂ ಮುಖಂಡರಲ್ಲಿ ಒಬ್ಬರಾಗಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ (Wasim Rizvi) ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.
ಈ ಹಿಂದೆ ಪ್ರವಾದಿ ಮುಹಮದರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದ ವಾಸಿಂ ರಿಜ್ವಿ ಅವರಿಗೆ ಮುಸ್ಲಿಂ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಅವರಿಗೆ ಸಾಕಷ್ಟು ಬೆದರಿಕೆಗಳೂ ಬರುತ್ತಿದ್ದವು. ಈ ಕುರಿತು ಸ್ವತಃ ರಿಜ್ವಿ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಮಾತನಾಡಿರುವ ಅವರು, 'ನನ್ನನ್ನು ಇಸ್ಲಾಂನಿಂದ ಹೊರಹಾಕಲಾಗಿದೆ, ಪ್ರತಿ ಶುಕ್ರವಾರ ನನ್ನ ತಲೆಯ ಮೇಲೆ ಬಹುಮಾನವನ್ನು ಹೆಚ್ಚಿಸಲಾಗುತ್ತಿದೆ. ಹಾಗಾಗಿ ಇಂದು ನಾನು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ರಿಜ್ವಿ ಅವರಿಗೆ ಇಂದು ಬೆಳಗ್ಗೆ 10.30ರ ಸುಮಾರಿಗೆ ಗಾಜಿಯಾಬಾದ್‌ನಲ್ಲಿನ ದಾಸನಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹಾನಂದ ಸರಸ್ವತಿ ಅವರ ಸಮ್ಮುಖದಲ್ಲಿ ಹಿಂಧೂ ಧರ್ಮ ದೀಕ್ಷೆ ನೀಡಲಾಗಿದೆ. ಯಜ್ಞದ ನಂತರ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಪ್ರವೇಶಿಸುತ್ತಿದ್ದಂತೆ ವೈದಿಕ ಸ್ತೋತ್ರಗಳನ್ನು ಪಠಿಸಿ ಅವರನ್ನು ಸ್ವಾಗತಿಸಲಾಯಿತು.
ಹಿಂಧೂ ಧರ್ಮ ಸ್ವೀಕರಿಸಿರುವ ರಿಜ್ವಿಗೆ ನೂತನ ಹೆಸರು
ಇನ್ನು ಹಿಂಧೂ ಧರ್ಮವನ್ನು ಸ್ವೀಕರಿಸಿರುವ ರಿಜ್ವಿ ಅವರಿಗೆ ಸನಾತನ ಧರ್ಮದಂತೆ ಹೊಸ ಹೆಸರು ನೀಡಲಾಗಿದೆ. ಅದರಂತೆ ರಿಜ್ವಿ ಅವರು ಇಂದಿನಿಂದ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅಂತೆಯೇ ತ್ಯಾಗಿ ಸಮುದಾಯದೊಂದಿಗೆ ಸಂಬಂಧ ಹೊಂದಿರುತ್ತಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಸರಸ್ವತಿ, ನಾವು ವಾಸಿಂ ರಿಜ್ವಿ ಜೊತೆಗಿದ್ದೇವೆ ಮತ್ತು ರಿಜ್ವಿ ತ್ಯಾಗಿ ನಮಗೆ ಸಹೋದರಾಗಿದ್ದಾರೆ ಎಂದರು. ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಅಲ್ಲದೆ ಇತ್ತೀಚೆಗಷ್ಟೇ ವಾಸಿಂ ರಿಜ್ವಿ ತಮ್ಮ ಇಚ್ಛೆಯನ್ನು ಹೇಳಿಕೊಂಡಿದ್ದ ರಿಜ್ವಿ, ತಾವು ಸತ್ತ ನಂತರ ಸಮಾಧಿ ಮಾಡಬಾರದು, ಆದರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ. ವಾಸಿಂ ರಿಜ್ವಿ ಯತಿ ನರಸಿಂಹಾನಂದರನ್ನು ತಮ್ಮ ಬೇಡಿಕೆ ಈಡೇರಿಸುವಂತೆ ಕೇಳಿಕೊಂಡಿದ್ದರು.
'ವಿಶ್ವದ ಪರಿಶುದ್ಧ ಧರ್ಮ... ಹಿಂದೂ ಧರ್ಮ';
ಇನ್ನು ಹಿಂದೂ ಧರ್ಮ ಸ್ವೀಕರಿಸಿದ ಬಳಿಕ ಮಾತನಾಡಿದ ರಿಜ್ವಿ, 'ಸನಾತನ ಧರ್ಮವಾದ ಹಿಂದೂ ಧರ್ಮ ವಿಶ್ವದ ಶುದ್ಧ ಧರ್ಮವಾಗಿದೆ. 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಡಿಸೆಂಬರ್ 6. ಹೀಗಾಗಿ ಈ ಪವಿತ್ರ ದಿನವನ್ನೇ ತಾವು ಹಿಂದೂ ಧರ್ಮಕ್ಕೆ ಮತಾಂತರವಾಗಲು ಆಯ್ಕೆ ಮಾಡಿಕೊಂಡಿದ್ದೇನೆ. ಅಂತೆಯೇ ನಾನು ಇಂದಿನಿಂದ ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತೇನೆ. ಮುಸ್ಲಿಮರ ಮತಗಳು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅವರು ಕೇವಲ ಹಿಂದೂಗಳನ್ನು ಸೋಲಿಸಲು ತಮ್ಮ ಮತಗಳನ್ನು ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ಪತ್ರಿಕೆ ವರದಿ ಮಾಡಿದೆ.