ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ ಅವರು ಇಹಲೋಕ ತ್ಯಜಿಸಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.
ಇತ್ತೀಚಿಗೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಅಪಘಾತ ಸಂಭವಿಸಿ ಶಿವರಾಂ ಅವರ ತಲೆಗೆ ಸ್ವಲ್ಪ ಪೆಟ್ಟಾಗಿತ್ತು. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಯಾವುದೇ ಸಮಸ್ಯೆಗಳೂ ಪತ್ತೆಯಾಗಿರಲಿಲ್ಲ. ಕಳೆದ ಮಂಗಳವಾರ ರಾತ್ರಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನಡೆಸಲಾಗಿದ್ದು, ಪೂಜೆ ಮಾಡಲು ಶಿವರಾಂ ಅವರು ಪೂಜೆ ಮನೆಗೆ ಹೋದಾಗ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ವೇಳೆ ಮಿದುಳಿನಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರು ಕೋಮಾಗೆ ಜಾರಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದರು.
ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬದಿದೆ.
ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಚಿತ್ರ ಹಾಗೂ ಸೀರಿಯಲ್ಗಳಲ್ಲಿ ಶಿವರಾಂ ಅವರು ನಟಿಸಿದ್ದರು. 1938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದ ಎಸ್. ಶಿವರಾಂ, 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಅವರು ಶಿವರಾಮಣ್ಣ ಎಂದೇ ಎಲ್ಲರಿಗೂ ಪರಿಚಿತರಾಗಿದ್ದರು. ಪೋಷಕ ನಟನಾಗಿ, ಹಾಸ್ಯನಟನಾಗಿ ನಟಿಸಿದ್ದ ಅವರು, ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಸೋದರ ರಾಮನಾಥನ್ ಜತೆ ಸೇರಿ ‘ರಾಶಿ ಬ್ರದರ್ಸ್’ ಸಿನಿಮಾ ಸಂಸ್ಥೆ ಸ್ಥಾಪಿಸಿ ಹಲವು ಚಿತ್ರ ನಿರ್ಮಿಸಿದ್ದರು. ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು. ಹಲವು ದಿಗ್ಗಜ ನಟರೊಂದಿಗೆ ಶಿವರಾಂ ತೆರೆ ಹಂಚಿಕೊಂಡಿದ್ದರು.