ನವದೆಹಲಿ: 'ಕೋವಿಡ್- 19 ಲಸಿಕೆ ಕಾರ್ಯಕ್ರಮದಲ್ಲಿ ಬೂಸ್ಟರ್ ಡೋಸ್‌ಗಳ ಅಗತ್ಯತೆ ಮತ್ತು ಸಮರ್ಥನೆಗಳ ಬಗ್ಗೆ ತಜ್ಞರ ಸಮಿತಿಗಳು ಇನ್ನೂ ಚರ್ಚಿಸುತ್ತಿದ್ದು, ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಮಾರ್ಗಸೂಚಿಗಳು ಲಭ್ಯವಿಲ್ಲ' ಎಂದು ಕೇಂದ್ರ ಸರ್ಕಾರವು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಬೂಸ್ಟರ್ ಡೋಸ್‌ಗೆ ಸಂಬಂಧಿಸಿದಂತೆ ಅರ್ಜಿದಾರರಾದ ರಾಕೇಶ್ ಮಲ್ಹೋತ್ರಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೇಳಿದ ಮಾಹಿತಿಗೆ ಕೇಂದ್ರ ಸರ್ಕಾರವು ತನ್ನ ಪ್ರತಿಕ್ರಿಯೆ ನೀಡಿದೆ. ಕೋವಿಡ್ ಲಸಿಕೆಗಳ ಬೂಸ್ಟರ್ ಡೋಸ್ ಅಗತ್ಯತೆ ಮತ್ತು ಅದಕ್ಕಾಗಿ ಸರ್ಕಾರವು ರೂಪಿಸಿರುವ ಕಾಲಾವಧಿಯ ವಿವರ ಸಲ್ಲಿಸುವಂತೆ ಹೈಕೋರ್ಟ್ ನ. 25ರಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.
'ಪ್ರಸ್ತುತ ರಾಷ್ಟ್ರೀಯ ಕೋವಿಡ್ -19 ಲಸಿಕಾ ಕಾರ್ಯಕ್ರಮವು ಅರ್ಹ ಜನಸಂಖ್ಯೆಗೆ ಸಂಪೂರ್ಣ ಲಸಿಕೆಯನ್ನು (ಎರಡು ಡೋಸ್) ನೀಡಲು ಆದ್ಯತೆ ನೀಡುತ್ತಿದೆ. ಆದರೆ, ತಜ್ಞರ ಎರಡು ಸಮಿತಿಗಳು ಬೂಸ್ಟರ್ ಡೋಸ್‌ಗಳ ಕುರಿತು ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ' ಎಂದು ಕೇಂದ್ರವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
'ಭಾರತದಲ್ಲಿ ಕೋವಿಡ್- 19 ಲಸಿಕೆಗಳಿಂದ ಉಂಟಾಗುವ ರೋಗನಿರೋಧಕತೆಯ ಅವಧಿಯ ಬಗ್ಗೆ ಪ್ರಸ್ತುತ ಜ್ಞಾನವು ಸೀಮಿತವಾಗಿದೆ ಮತ್ತು ಇದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಸ್ಪಷ್ಟವಾಗಿ ತಿಳಿಯುತ್ತದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇಮ್ಯುನೈಸೇಶನ್ ವಿಭಾಗದ ಉಪ ನಿರ್ದೇಶಕರು ಲಿಖಿತವಾಗಿ ತಿಳಿಸಿದ್ದಾರೆ.
'ಸಾರ್ಸ್-ಕೋವ್-2 ಸೋಂಕಿನ ಪರಿಣಾಮದಿಂದ 2020ರಲ್ಲಿ ಕೋವಿಡ್ ಹೊಸ ಸಾಂಕ್ರಾಮಿಕ ರೋಗವಾಗಿ ಭಾರತದ ಮೇಲೆ ಪರಿಣಾಮ ಬೀರಿದ್ದು, ಅದರ ಸಂಪೂರ್ಣ ಜೈವಿಕ ಗುಣಲಕ್ಷಣಗಳು ಇನ್ನೂ ತಿಳಿಸಿಲ್ಲ. ಹಾಗಾಗಿ, ಇಂಥ ಸಂದರ್ಭಗಳಲ್ಲಿ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಸೂಕ್ತವೇ ಅಥವಾ ಅಗತ್ಯವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ' ಎಂದೂ ಸರ್ಕಾರವು ಹೇಳಿದೆ.