ಕಾಸರಗೋಡು: ಕೇಂದ್ರದ ಮಾದರಿಯಲ್ಲಿ ಕೇರಳ ಸರ್ಕಾರವೂ ಇಂಧನ ಬೆಲೆ ಇಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಕಾಸರಗೋಡು ತಾಲೂಕು ಆಸ್ಪತ್ರೆ ವಠಾರದಲ್ಲಿ ಮಂಗಳವಾರ ಸಂಜೆ ಧರಣಿ ನಡೆಯಿತು.
ಬಿಜೆಪಿ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಧರಣಿ ಉದ್ಘಾಟಿಸಿ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿತಗೊಳಿಸದೆ, ರಾಜ್ಯ ಸರ್ಕಾರ ಜನತೆಗೆ ದ್ರೋಹ ಬಗೆದಿದೆ. ಇತರ ರಾಜ್ಯಗಳು ಕೇಂದ್ರದ ತೀರ್ಮಾನದನ್ವಯ ಇಂಧನಬೆಲೆ ಇಳಿಸಿ ಮಾದರಿಯಾಗಿದ್ದರೂ, ಕೇರಳದ ಎಡರಂಗ ಸರ್ಕಾರ ಇಲ್ಲಿನ ಜನತೆಯ ಅಹವಾಲು ಮನ್ನಿಸಲು ತಯಾರಾಗದಿರುವುದು ವಿಪರ್ಯಾಸ. ಕೋವಿಡ್ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರದಿಂದ ದವಸ-ಧಾನ್ಯ ಸೇರಿದಂತೆ ಅಪಾರ ಪ್ರಮಾಣದಲ್ಲಿ ಆಹಾರವಸ್ತು ಬಂದು ಸೇರಿದ್ದರೂ, ಇದನ್ನು ಕೇರಳ ಸರ್ಕಾರ ತನ್ನದೇ Pಕೊಡುಗೆ ಎಂಬುದಾಗಿ ಬಿಂಬಿಸಿದೆ. ರಾಜ್ಯದಲ್ಲಿ ಎಡ-ಜಿಹಾದಿ ಶಕ್ತಿಗಳ ಸಮ್ಮಿಲನ ಭವಿಷ್ಯದಲ್ಲಿ ರಾಜ್ಯಕ್ಕೆ ಭಾರಿ ಆತಂಕ ತಂದೊಡ್ಡಲಿರುವುದಾಗಿ ತಿಳಿಸಿದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಪ್ರಮಿಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಕೀಲ ಸದಾನಂದ ರೈ, ಕಾರ್ಯದರ್ಶಿ ಎಂ. ಉಮಾ ಕಡಪ್ಪುರ, ಸವಿತಾ ಟೀಚರ್ ಉಪಸ್ಥಿತರಿದ್ದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಸ್ವಾಗತಿಸಿದರು. ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು.