ಮುಂಬೈ: ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಅರ್ಧಂಬರ್ಧ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಬಗ್ಗೆ ಹಲವು ನಾಯಕರು ಅವರ ವಿರುದ್ಧ ವ್ಯಂಗ್ಯವಾಡಿದ್ದು, ಬ್ಯಾನರ್ಜಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಆರೋಪಿಸಿರುವ ಬಿಜೆಪಿ ಮುಖಂಡರೊಬ್ಬರು ದೀದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂರು ದಿನದ ಪ್ರವಾಸಕ್ಕಾಗಿ ಮಮತಾ ಬ್ಯಾನರ್ಜಿ ಮುಂಬೈ ತಲುಪಿದ್ದರು. ಈ ಸಮಯದಲ್ಲಿ ಅವರು ತುಂಬಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದರು. ಇನ್ನು ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಸಂಜಯ್ ರಾವುತ್ ಮತ್ತು ಆದಿತ್ಯ ಠಾಕ್ರೆ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರನ್ನು ಭೇಟಿಯಾದರು.
ಇದಲ್ಲದೇ ಮುಂಬೈನಲ್ಲಿಯೇ ಪತ್ರಿಕಾಗೋಷ್ಠಿಯೊಂದನ್ನು ಮಾಡಿದ್ದು ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಕುಳಿತಲ್ಲೇ ರಾಷ್ಟ್ರಗೀತೆ ಹಾಡಲು ಆರಂಭಿಸಿದರು. ಎರಡು ಸಾಲು ಹಾಡಿದ ನಂತರ ಎದ್ದು ಮತ್ತೆರಡು ಸಾಲುಗಳನ್ನು ಹಾಡಿದಳು. ಇದಾದ ನಂತರ ಅದನ್ನು ಅಪೂರ್ಣವಾಗಿ ಬಿಟ್ಟು ಪತ್ರಿಕಾಗೋಷ್ಠಿಗಳನ್ನು ನಡೆಸತೊಡಗಿದ್ದು ಅವರ ವರ್ತನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಮೊದಲು ಕುಳಿತುಕೊಂಡು ರಾಷ್ಟ್ರಗೀತೆಯನ್ನು ಶುರುಮಾಡಿ ನಂತರ ಎದ್ದುನಿಂತು ಭಾರತದ ರಾಷ್ಟ್ರಗೀತೆಯನ್ನು ಹಾಡುವುದನ್ನು ಅರ್ಧಕ್ಕೆ ನಿಲ್ಲಿಸಿದರು. ಇಂದು ಮುಖ್ಯಮಂತ್ರಿಯಾಗಿ ಅವರು ಬಂಗಾಳದ ಸಂಸ್ಕೃತಿ, ರಾಷ್ಟ್ರಗೀತೆ, ದೇಶ ಮತ್ತು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಟ್ವೀಟ್ ಮಾಡಿದೆ.