ನವದೆಹಲಿ: ಛತ್ತೀಸ್ಗಡದ ರಾಯ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರ ಚಿಂತನೆಗಳನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಭಾನುವಾರ ರಾಯ್‌ಪುರದಲ್ಲಿ ನಡೆದ ‘ಧರ್ಮ ಸಂಸತ್’ ಧಾರ್ಮಿಕ ಸಭೆಯೊಂದರಲ್ಲಿ ಹಿಂದೂ ಧಾರ್ಮಿಕ ಮುಖಂಡರ ಒಂದು ವಿಭಾಗವು ಮಹಾತ್ಮ ಗಾಂಧಿಯವರನ್ನು ಕೊಂದ ಹಂತಕ ನಾಥೂರಾಂ ಗೋಡ್ಸೆ ಕುರಿತ ಹಾಡುಗಳನ್ನು ಹಾಡಿದ ನಂತರ ರಾಹುಲ್ ಗಾಂಧಿಯವರಿಂದ ಈ ಹೇಳಿಕೆ ಬಂದಿದೆ.
“ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ಹಿಂಸಿಸಬಹುದು, ನೀವು ಈ ದೇಹವನ್ನು ನಾಶಪಡಿಸಬಹುದು, ಆದರೆ ನೀವು ನನ್ನ ಆಲೋಚನೆಗಳನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ಮಹಾತ್ಮ ಗಾಂಧಿಜೀಯವರ ಮಾತನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಯ್‌ಪುರದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್‌ನ ಸಮಾರೋಪದಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರು ರಾಷ್ಟ್ರಪತಿ ಮಹಾತ್ಮ ಗಾಂಧಿಜೀ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಧರ್ಮವನ್ನು ರಕ್ಷಿಸಲು ನಿಷ್ಠಾವಂತ ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು.
ಇದಕ್ಕೂ ಮುನ್ನ ಉತ್ತರ ಪ್ರದೇಶದ ವಿವಾದಿತ ಅರ್ಚಕ ಯತಿ ನರಸಿಂಹಾನಂದ ಗಿರಿ ಅವರು ನಾಥೂರಾಂ ಗೋಡ್ಸೆಯನ್ನು ಸತ್ಯ ಮತ್ತು ಧರ್ಮದ ಪ್ರತೀಕ ಎಂದು ಹೊಗಳಿದ್ದರು.