ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಉತ್ತಮ ಕುಟುಂಬದಿಂದ ಬಂದ ಉತ್ತಮ ಅಧಿಕಾರಿ ಎಂದು ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಶಂಕರ್ ರಾಯ್ ಚೌಧರಿ ತಿಳಿಸಿದ್ದಾರೆ. ಭೂ, ವಾಯು ಮತ್ತು ನೇವಿ, ಇವು ಮೂರೂ ಶಕ್ತಿಗಳ ನಡುವೆ ಅಗತ್ಯವಿದ್ದ ಸಮನ್ವಯ ತರುವ ಕೆಲಸದಲ್ಲಿ ರಾವತ್ ನಿರತರಾಗಿದ್ದರು ಎಂದು ಚೌಧರಿ ವಿವರ ಬಿಚ್ಚಿಟ್ಟಿದ್ದಾರೆ.
ಬಿಪಿನ್ ರಾವತ್ ಅವರ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಚೌಧರಿ ಅವರು ಸ್ಟಾಫ್ ಅಧಿಕಾರಿ ಹುದ್ದೆ ನಿರ್ವಹಿಸುತ್ತಿದ್ದರು. ಹೀಗಾಗಿ ರಾವತ್ ಕುಟುಂಬವನ್ನು ಹತ್ತಿರದಿಂದ ಬಲ್ಲವರಾಗಿದ್ದರು.
ನಮ್ಮೆಲ್ಲರ ನಿರೀಕ್ಷೆಯನ್ನು ಮೀರಿ ಬಿಪಿನ್ ರಾವತ್ ಬೆಳೆದು ಸೇನಾ ದಂಡ ನಾಯಕ ಹುದ್ದೆಗೇರಿದರು ಎಂದು ಚೌಧರಿಯವರು, ಸೇನೆ ಮೂರು ಪಡೆಗಳ ನಡುವೆ ಯಾವುದೇ ಬಗೆಯ ಭಿನ್ನಾಭಿಪ್ರಾಯ ಬಾರದಂತೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ವೆಲ್ಲಿಂಗ್ಟನ್ ನಲ್ಲಿ ಸೇನಾ ಸಿಬ್ಬಂದಿ ಮತ್ತು ತರಬೇತಿ ಪಡೆಯುತ್ತಿದ್ದ ಅಧಿಕಾರಿಗಳನ್ನು ಭೇಟಿ ಮಾಡುವ ಸಲುವಾಗಿ ರಾವತ್ ತೆರಳಿದ್ದರು. ಈ ವೇಳೆ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ.