ನವದೆಹಲಿ: ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಸಾರ ಬಾರತಿ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಒಪ್ಪಂದ ಮಾಡಿಕೊಂಡಿದ್ದು, ಸೋಮವಾರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.
ಒಪ್ಪಂದದ ಪ್ರಕಾರ ಐಸಿಸಿಆರ್ ಜೊತೆ ಸಹಯೋಗ ಹೊಂದಿರುವ ಪ್ರಸಿದ್ಧ ಕಲಾವಿದರ ಪ್ರದರ್ಶನಗಳನ್ನು ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
ಕಲಾವಿದರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ವಾರಕ್ಕೆ ಒಂದು ಕಾರ್ಯಕ್ರಮದಂತೆ ಡಿಡಿ ನ್ಯಾಷನಲ್, ಡಿಡಿ ಇಂಡಿಯಾ, ದೂರದರ್ಶನದ ಪ್ರಾದೇಶಿಕ ವಾಹಿನಿಗಳು ಮತ್ತು ಪ್ರಸಾರ ಭಾರತಿಯ ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು'.
'ಪ್ರದರ್ಶನ ಕಲಾವಿದರಿಗೆ ದೂರದರ್ಶನ ಮತ್ತು ಡಿಜಿಟಲ್‌ನಲ್ಲಿ ವೇದಿಕೆ ಕಲ್ಪಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೀಕ್ಷಕರ ಮುಂದೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ತೆರೆದಿಡುವುದು ಈ ಒಪ್ಪಂದದ ಉದ್ದೇಶವಾಗಿದೆ' ಎಂದು ಸಚಿವಾಲಯ ಹೇಳಿದೆ.