ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಯೆಲ್ಲೋ ಅಲರ್ಟ್ ಘೋಷಣೆಯು ರಾತ್ರಿ ಕರ್ಫ್ಯೂ, ಶಾಲೆಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡುವುದು, ಸಮ-ಬೆಸ ಆಧಾರದ ಮೇಲೆ ಅನಿವಾರ್ಯವಲ್ಲದ ಅಂಗಡಿಗಳನ್ನು ತೆರೆಯುವುದು. ಮೆಟ್ರೋ ರೈಲುಗಳು ಮತ್ತು ಬಸ್‌ಗಳಲ್ಲಿ ಆಸನ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರ ಪ್ರಯಾಣಿಸಬೇಕು ಎಂಬ ನಿರ್ಬಂಧಗಳನ್ನು ಒಳಗೊಂಡಿದೆ.
ಕೋವಿಡ್ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಹೆಚ್ಚಿನ ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿಯ ಪ್ರಮಾಣ ಸತತ ಎರಡು ದಿನಗಳಿಂದ ಏರಿಕೆಯಾಗುತ್ತಿದೆ. ಪಾಸಿಟಿವ್ ಪ್ರಮಾಣ ಶೇಕಡಾ 0.5 ಕ್ಕಿಂತ ಹೆಚ್ಚಿದ್ದರೆ ಯೆಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. ಕಳೆದ ಎರಡು ದಿನಗಳಲ್ಲಿ ದೆಹಲಿಯಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 0.5 ಕ್ಕಿಂತ ಹೆಚ್ಚಿದೆ.
ಜನರು ಮಾಸ್ಕ್ ಧರಿಸದೆ ಮಾರುಕಟ್ಟೆಗಳು ಮತ್ತು ಮಾಲ್‌ಗಳಿಗೆ ಭೇಟಿ ನೀಡುತ್ತಿರುವುದು ದುರದೃಷ್ಟಕರ ಎಂದ ಕೇಜ್ರಿವಾಲ್, ಕೋವಿಡ್ ನಿಯಮಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದರು.