ಕೋಝಿಕ್ಕೋಡ್ :ಭಾರತದ ದಿಗ್ಗಜ ಅಥ್ಲೀಟ್, ಓಟದ ರಾಣಿ ಎಂದೇ ಹೆಸರು ವಾಸಿಯಾಗಿರುವ ಪಿ.ಟಿ. ಉಷಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಝಿಕ್ಕೋಡ್ ಪೊಲೀಸರು ಪಿ ಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನ ಮೇರೆಗೆ ಉಷಾ ಸೇರಿದಂತೆ ಇತರ ಆರು ಮಂದಿ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಪಿಟಿ ಉಷಾ ಅವರ ಖಾತರಿಯಂತೆ , ಜೆಮ್ಮಾ ಜೋಸೆಫ್ ಕೇರಳದ ಕೋಝಿಕ್ಕೋಡ್‌ನಲ್ಲಿ 1,012 ಚದರ ಅಡಿ ಫ್ಲಾಟ್ ಅನ್ನು ಬಿಲ್ಡರ್ ಒಬ್ಬರಿಂದ ಖರೀದಿಸಿದ್ದಾರೆ.
ಈ ಕ್ರಮವಾಗಿ ಜೋಸೆಫ್ ಕಂತುಗಳ ರೂಪದಲ್ಲಿ ರೂ. 46 ಲಕ್ಷ ರೂ ಪಾವತಿಸಿದ್ದಾರೆ. ಹಣ ಪಾವತಿಸಿದ್ದರೂ ಬಿಲ್ಡರ್ ಜೋಸೆಫ್ ಗೆ ಫ್ಲಾಟ್ ಬರೆದುಕೊಟ್ಟಿರಲಿಲ್ಲ. ಇದರೊಂದಿಗೆ ಜೋಸೆಫ್ ಕೋಝಿಕ್ಕೋಡ್ ಪೊಲೀಸರ ಮೊರೆ ಹೋಗಿದ್ದಾರೆ. ಪಿ.ಟಿ. ಉಷಾ ನೀಡಿದ ಖಾತರಿಯಂತೆ ಬಿಲ್ಡರ್ ಗೆ ಹಣ ಪಾವತಿಸಿದ್ದರೂ ಬಿಲ್ಡರ್ ಫ್ಲಾಟ್ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಜೋಸೆಫ್ ದೂರಿನ ಸಂಬಂಧ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎವಿ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದು, ಪ್ರಕರಣವನ್ನು ವೆಲ್ಲೂರು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.