ನವದೆಹಲಿ: ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ಮತ್ತು ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದು ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಿಂದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸೇರಿದಂತೆ ಹಲವು ಸಂಘಟನೆಗಳು ವಿಜಯೋತ್ಸವ ಆಚರಿಸುತ್ತಾ ಸ್ಥಳವನ್ನು ತೊರೆದಿದ್ದಾರೆ.
ಮೊನ್ನೆ ರೈತ ಸಂಘಟನೆಗಳು ನೀಡಿದ್ದ ವಾಗ್ಧಾನದಂತೆ ಇಂದು ದೆಹಲಿ ಗಡಿಯನ್ನು ಖಾಲಿ ಮಾಡುವುದಾಗಿ ಮತ್ತು ಜನವರಿ 15 ರಂದು ಮತ್ತೊಂದು ಸಭೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಕೇಂದ್ರದ ಪರಿಷ್ಕೃತ ಪ್ರಸ್ತಾವನೆ ಬಂದ ಕೂಡಲೇ, ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸುವುದಾಗಿ ತಿಳಿಸಿದ್ದವು.
ರೈತರು ವಿಜಯೋತ್ಸಾಹ: ತಮ್ಮ ಒಂದು ವರ್ಷದ ಪ್ರತಿಭಟನೆ ಯಶಸ್ವಿಯಾಗಿದ್ದು ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು, ಪ್ರತಿನಿಧಿಗಳು ಟಿಕ್ರಿ ಗಡಿಭಾಗದಲ್ಲಿ ನೃತ್ಯ ಮಾಡುತ್ತಾ ವಿಜಯೋತ್ಸಾಹ ನಡೆಸಿದರು. ಅಲ್ಲಿ ಹಾಕಿದ್ದ ಟೆಂಟ್-ಡೇರೆಗಳನ್ನು ತೆಗೆದರು. ಗಾಜಿಪುರ ಗಡಿಯಲ್ಲಿದ್ದ ಟೆಂಟ್ ಗಳನ್ನು ತೆಗೆದು ತಮ್ಮೂರಿಗೆ ಹಿಂತಿರುಗಿದ್ದಾರೆ.
ಈ ಸಂದರ್ಭದಲ್ಲಿ ಗಾಜಿಪುರ ಗಡಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಕಾಯತ್, ಇಂದು ಬೆಳಗ್ಗೆ ರೈತರ ದೊಡ್ಡ ಗುಂಪು ಪ್ರತಿಭಟನಾ ಸ್ಥಳ ತೊರೆದಿದೆ. ಇಂದಿನ ಸಭೆಯಲ್ಲಿ ಸಭೆ ನಡೆಸಿ ಪ್ರಾರ್ಥನೆ, ಭಜನೆ, ನೃತ್ಯ ಮಾಡಿ ಸಂತೋಷದಿಂದ ತಮ್ಮೂರಿಗೆ ತೆರಳುತ್ತಾರೆ.ಈಗಾಗಲೇ ಹಲವರು ಗಡಿ ತೊರೆದಿದ್ದಾರೆ. ಎಲ್ಲರೂ ಸಂಪೂರ್ಣವಾಗಿ ತೊರೆಯುವ ಪ್ರಕ್ರಿಯೆ ಮುಗಿಯಲು ನಾಲ್ಕೈದು ದಿನಗಳು ಬೇಕಾಗಬಹುದು, ನಾನು ಡಿಸೆಂಬರ್ 15ಕ್ಕೆ ತೆರಳುತ್ತೇನೆ ಎಂದರು.