ಕಾಸರಗೋಡು: ಏಡ್ಸ್ ಜನಜಾಗೃತಿಯೊಂದಿಗೆ ಕುಂಬಳೆ ಸಾಮಾಜಿಕ ಆರೋಗ್ಯ ಕೇಂದ್ರ ವತಿಯಿಂದ ನಿರ್ಮಿಸಲಾದ'ಪೋಸೆಟಿವ್'ಕಿರು ಚಿತ್ರವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಏಡ್ಸ್ ವಿರುದ್ಧ ದಿನಾಚರಣೆ ಸಂಬಂಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಚ್‍ಐವಿ ಬಾಧಿತರು ಕಾಯಿಲೆಯನ್ನು ಮೀರಿ ನಡೆಸುತ್ತಿರುವ ಜೀವನಚಿತ್ರವನ್ನು ಚಿತ್ರೀಕರಿಸಲಾಗಿದೆ. ರೋಗ ಬಾಧಿತರಿಗೆ ರೋಗಪ್ರತಿರೋಧ ಚಿಕಿತ್ಸೆ, ಉಚಿತ ಔಷಧ, ಎಆರ್ಟಿ ವತಿಯಿಂದ ವಿವಿಧ ಸವಲ್ತುಗಳ ಬಗ್ಗೆಯೂ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅವರ ಪರಿಕಲ್ಪನೆಯೊಂದಿಗೆ ಚಿತ್ರ ರಚಿಸಲಾಗಿದೆ. ವೈದ್ಯಾಧಿಕಾರಿ ಡಾ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಮುಖ್ಯ ಅತಿಥಿಯಾಘಿದ್ದರು. ಜಿಲ್ಲಾ ಏಡ್ಸ್ ಸೆಲ್ ನೋಡೆಲ್ ಅಧಿಕಾರಿ ಡ. ಆಮಿನಾ ಮುಂಡೋಳ್ ಏಡ್ಸ್ ದಿನ ಸಂದೇಶ ವಾಚಿಸಿದರು.