ಕುಂಬಳೆ: ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಯನ್ನು ಪ್ರತಿಭಟಿಸಿ ಬಿಜೆಪಿ ಓಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿಯು ಕುಂಬಳೆ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಪ್ರತಿಭಟನೆಯನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ ಮಾತನಾಡಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ರಂಜಿತ್ ಶ್ರೀನಿವಾಸನ್ ಅವರು ಧಾರ್ಮಿಕ ಉಗ್ರಗಾಮಿಗಳಿಂದ ಹತ್ಯೆಗೀಡಾದ ನಾಲ್ಕನೇ ಸಂಘಪರಿವಾರದ ನಾಯಕರಾಗಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಮತೀಯ ಶಕ್ತಿಗಳಿಂದ ಹಾನಿಗೊಂಡಿರುವುದು ಮತ್ತು ರಾಜ್ಯ ಸರ್ಕಾರ ಅವರೊಂದಿಗೆ ಕೈಜೋಡಿಸಿರುವುದು ಇದರಿಂದ ವೇದ್ಯವಾಗುತ್ತದೆ. ಬೇಲಿಯೇ ಎದ್ದು ಹೊಲ ಮೇಯ್ದಂತಹ ಸ್ಥಿತಿ ರಾಜ್ಯದಲ್ಲಿದ್ದು ಕೂಡಲೇ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಮದವರು ಆಗ್ರಹಿಸಿದರು.
ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಸುನೀಲ್ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್ ಸ್ವಾಗತಿಸಿ, ವಸಂತಕುಮಾರ್ ಮಯ್ಯ ವಂದಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಗಟ್ಟಿ, ಕಾರ್ಯದರ್ಶಿಗಳಾದ ಧನರಾಜ್ ಸೀತಂಗೋಳಿ, ಮುಖಂಡರಾದ ಮಹೇಶ್ ಪುಣಿಯೂರು, ದಿನೇಶ್ ಮುಳಿಂಜ, ಜಗದೀಶ್ ಪೇರಾಲ್ ಪಂಚಾಯಿತಿ ಸದಸ್ಯರಾದ ವಿದ್ಯಾ ಪೈ, ಅಜಯ್ ನಾಯ್ಕಾಪು, ವಿವೇಕಾನಂದ ಶೆಟ್ಟಿ, ಶೋಭಾ, ಜನಾರ್ದನ, ಬಿಜೆಪಿ ಕುಂಬಳ ಪಂಚಾಯಿತಿ ಕಾರ್ಯದರ್ಶಿ ಜಿತೇಶ್ ಉಪಸ್ಥಿತರಿದ್ದರು.