ಕಾಸರಗೋಡು: ಹಾಸ್ಯವು ಆರೋಗ್ಯ ವರ್ಧಕ ಟಾನಿಕ್. ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡವರು ಶಾಂತಿ, ಸಮಾಧಾನ, ಸಾಮರಸ್ಯದ ಬದುಕು ಸಾಗಿಸುತ್ತಾರೆ. ಆರೋಗ್ಯಪೂರ್ಣ ಹಾಸ್ಯದಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ ಎಂದು ಖ್ಯಾತ ಕವಿ, ವ್ಯಂಗ್ಯ ಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅಭಿಪ್ರಾಯಪಟ್ಟರು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಗುರುನಮನ ಕಾರ್ಯಕ್ರಮದಂಗವಾಗಿ ಭಾನುವಾರ ನಡೆದ ಚುಟುಕು ಕವಿ ಸಮ್ಮಿಲನ, ಹಾಸ್ಯ ಕವಿಗೋಷ್ಠಿ, ಹಾಸ್ಯ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಸ್ಯದ ವಿವಿಧ ಪ್ರಕಾರಗಳ ಬಗ್ಗೆ ಮಾತನಾಡಿದರು. ಹಿರಿಯ ಸಾಹಿತಿಗಳಾದ ವೈ.ಸತ್ಯನಾರಾಯಣ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ನರಸಿಂಹ ಭಟ್ ಯೇತಡ್ಕ ಅವರಿಗೆ ಕನ್ನಡ ಭವನ ಗ್ರಂಥಾಲಯದ ವಿಂಶತಿ ವರ್ಷಾಚರಣೆ ಯಂಗವಾಗಿ ಗುರುನಮನ ಸಲ್ಲಿಸಲಾಯಿತು. ಕನ್ನಡ ಭವನ ಗ್ರಂಥಾಲಯದ ಭರವಸೆಯ ಬೆಳಕು ಪ್ರಥಮ ಬಾಲಪ್ರತಿಭಾ ಪುರಸ್ಕಾರವನ್ನು ಬಹುಮುಖ ಪ್ರತಿಭೆಯ ಕಲಾವಿದ, ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಆದ್ಯಂತ್ ಅಡೂರು ಅವರಿಗೆ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯಕ್ಕೆ ಕಾಸರಗೋಡಿನ ಕವಿಗಳ ಕೊಡುಗೆ ವಿಷಯದಲ್ಲಿ ಕವಿ, ಪತ್ರಕರ್ತ, ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ಸುಂದರ ಬಾರಡ್ಕ ಅಭಿನಂದನಾ ನುಡಿಗಳನ್ನಾಡಿದರು. ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ಕೆ.ವಾಮನ ರಾವ್ ಬೇಕಲ್, ಕೋಶಾ|ಧಿಕಾರಿ ಕೆ.ಪಿ.ಸಂಧ್ಯಾರಾಣಿ ಮತ್ತು ಪದಾಧಿಕಾರಿಗಳು ಗುರುನಮನ ಸಲ್ಲಿಸಿದರು. ಹಾಸ್ಯಗೋಷ್ಠಿಯಲ್ಲಿ ವೈ.ಸತ್ಯನಾರಾಯಣ ಹಾಸ್ಯ ಚಟಾಕಿ ಹಾರಿಸಿದರು. ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ನರಸಿಂಹ ಭಟ್ ಯೇತಡ್ಕ, ಗಿರೀಶ್ ಪಿ.ಎಂ.ಚಿತ್ತಾರಿ, ವಿಶಾಲಾಕ್ಷ ಪುತ್ರಕಳ, ರೇಖಾ ರೋಶನ್, ಉಷಾ ಟೀಚರ್ ಚಿತ್ತಾರಿ, ಬಾಲಕೃಷ್ಣ ಬೇರಿಕೆ, ವಿರಾಜ್ ಅಡೂರು, ದೇವರಾಜ್ ಆಚಾರ್ಯ, ವಿದ್ಯಾಗಣೇಶ್ ಅಣಂಗೂರು ಕಾವ್ಯದ ಮೂಲಕ ಹಾಸ್ಯ ಪ್ರಜ್ಞೆಯನ್ನು ಅಭಿವ್ಯಕ್ತಿಸಿದರು.
ಕೆ.ವಾಮನ ರಾವ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ವೀಜಿ ಕಾಸರಗೋಡು ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಕಲಾವಿದ ಪ್ರದೀಪ್ ಬೇಕಲ್ ರಚಿಸಿದ ವರ್ಣಚಿತ್ರ ಪ್ರದರ್ಶನವನ್ನು ಕವಿ, ವ್ಯಂಗ್ಯ ಚಿತ್ರಕಲಾವಿದ ವೆಂಕಟ್ ಭಟ್ ಎಡನೀರು ಮತ್ತು ಗಡಿನಾಡ ಸಾಂಸ್ಕøತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಜಂಟಿಯಾಗಿ ಉದ್ಘಾಟಿಸಿದರು.