ಪತ್ತನಂತಿಟ್ಟು: ಶಬರಿಮಲೆಯಲ್ಲಿ ಇಂದು ಮಂಡಲ ಪೂಜೆ ಸಮಾಪ್ತಿಗೊಂಡಿತು. ಮೀನ ರಾಶಿಯ ಮುಹೂರ್ತದಲ್ಲಿ ಬೆಳಗ್ಗೆ 11.50 ರಿಂದ 1.10 ರವರೆಗೆ ಮಂಡಲ ಪೂಜೆ ನಡೆಯಿತು. ರಾತ್ರಿ ಹರಿವರಾಸನ ಹಾಡುವ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು. ಈ ಮೂಲಕ 41 ದಿನಗಳ ಕಾಲ ನಡೆದ ಮಂಡಲ ಉತ್ಸವಕ್ಕೆ ತೆರೆ ಬಿದ್ದಿದೆ.
ಆರನ್ಮುಳ ಪಾರ್ಥಸಾರಥಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತಂದ ತಂಕ ಅಂಕಿ(ಬಂಗಾರದ ವಸ್ತ್ರ) ಅಯ್ಯಪ್ಪ ಸ್ವಾಮಿಗೆ ಹೊದೆಸಿ ವಿಶೇಷ ಅಲಂಕಾರಗಳಿಂದ ಪೂಜೆ ನಡೆಯಿತು. ನಿನ್ನೆ ನಡೆದ ಮೆರವಣಿಗೆಯನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು.
ಡಿ.22ರಂದು ಅರನ್ಮುಳದಿಂದ ಹೊರಟ ಮೆರವಣಿಗೆ ನಿನ್ನೆ ಸಂಜೆ 5.30ಕ್ಕೆ ಸಾರಂಕುಟ್ಟಿ ತಲುಪಿತು. ನಂತರ ದೇವಸ್ವಂ ಅಧಿಕಾರಿಗಳು ವಾದ್ಯಗಳೊಂದಿಗೆ ಸನ್ನಿಧಾನಕ್ಕೆ ಬರಮಾಡಿಕೊಂಡರು. ಧ್ವಜಸ್ತಂಭದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷರು ಹಾಗೂ ಇತರರು ಸ್ವಾಗತಿಸಿದರು. ತಂತ್ರಿ ಮತ್ತು ಮೇಲ್ಶಾಂತಿಯವರು ಮೆಟ್ಟಿಲುಗಳ ಮೇಲೆ ಆಭರಣ ಪೆಟ್ಟಿಗೆಯನ್ನು ಪಡೆದುಕೊಮಡರು. ದೇವಸ್ವಂ ಸಚಿವ ರಾಧಾಕೃಷ್ಣನ್ ಮತ್ತಿತರರು ಉಪಸ್ಥಿತರಿದ್ದರು.
ಡಿ. 30ರಂದು ರಾತ್ರಿ ಪಾದಯಾತ್ರೆ ಬಳಿಕ ಸಂಜೆ 5 ಗಂಟೆಗೆ ಮಕರವಿಳಕ್ಕು ಉತ್ಸವಕ್ಕೆ ಚಾಲನೆ ದೊರಕಲಿದೆ.