ಮುಂಬೈ: ದಕ್ಷಿಣ ಆಫ್ರಿಕಾ ಮತ್ತು ಇತರ ಹೆಚ್ಚು ಅಪಾಯಕಾರಿ ದೇಶಗಳಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ ಆರು ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ.
ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಂದ ಆಗಮಿಸಿದ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯ ಕಲ್ಯಾಣ್-ಡೊಂಬಿವಲಿ, ಮೀರಾ-ಭಯಂದರ್ ಮತ್ತು ಪುಣೆಯ ಮೂವರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ನೈಜೀರಿಯಾದಿಂದ ಬಂದ ಇಬ್ಬರು ಪ್ರಯಾಣಿಕರು ಪುಣೆಯ ನೆರೆಯ ಪಿಂಪ್ರಿ-ಚಿಂಚ್‌ವಾಡ್ ಕಾರ್ಪೊರೇಷನ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.
"ಪ್ರಸ್ತುತ, ರಾಜ್ಯದಲ್ಲಿ ದಕ್ಷಿಣ ಆಫ್ರಿಕಾ ಅಥವಾ ಇತರ ಹೆಚ್ಚಿನ ಅಪಾಯದ ದೇಶಗಳಿಂದ ಆಗಮಿಸಿದ ಆರು ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರೆಲ್ಲರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಮತ್ತು ಅವರ ಸಂಪರ್ಕ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಈ ಎಲ್ಲಾ ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದರೂ ಅವರು ಲಕ್ಷಣರಹಿತ ಅಥವಾ ಸ್ವಲ್ಪ ರೋಗಲಕ್ಷಣಗಳನ್ನು ಹೊಂದಿದ್ದಾರೆ" ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನವೆಂಬರ್ 26 ರಂದು ವಿಶ್ವ ಆರೋಗ್ಯ ಸಂಸ್ಥೆ(WHO) ದಕ್ಷಿಣ ಆಫ್ರಿಕಾ ಮತ್ತು ಇತರ ಕೆಲವು ದೇಶಗಳಲ್ಲಿ ಕೊರೋನಾ ವೈರಸ್ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ ಎಂದು ಹೇಳಿತ್ತು.