ನವದೆಹಲಿ :ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ ಪಾಲಿಸಿದಾರರು ಪಾಲಿಸಿ ಅರ್ಜಿಗೆ ಸಹಿ ಮಾಡುವಾಗ ಘೋಷಿಸಿರುವ ಅನಾರೋಗ್ಯವನ್ನು ಉಲ್ಲೇಖಿಸಿ ವಿಮಾ ಕಂಪನಿಗಳು ವಿಮೆ ಹಣದ ಹಕ್ಕು ಕೋರಿಕೆಯನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಪಾಲಿಸಿದಾರರು ತನಗೆ ಗೊತ್ತಿರುವ ಎಲ್ಲ ವಾಸ್ತವಿಕ ಸಂಗತಿಗಳನ್ನು ವಿಮಾ ಕಂಪನಿಗಳಿಗೆ ಬಹಿರಂಗಗೊಳಿಸುವುದು ಅಗತ್ಯವಾಗಿದೆ ಎಂದೂ ಹೇಳಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು, ಪಾಲಿಸಿ ಖರೀದಿದಾರರು ವಿಮೆಗೆ ಸಂಬಂಧಿಸಿದ ಎಲ್ಲ ವಿಷಯಗಳು ಮತ್ತು ಸಂದರ್ಭಗಳನ್ನು ತಿಳಿದಿರುತ್ತಾರೆ ಎಂದು ಭಾವಿಸಲಾಗುತ್ತದೆ ಎಂದು ತಿಳಿಸಿದೆ. ಪಾಲಿಸಿದಾರರು ತಮಗೆ ಗೊತ್ತಿರುವುದನ್ನು ಮಾತ್ರ ಘೋಷಿಸಬಹುದು,ಆದರೆ ಅವರ ಕರ್ತವ್ಯವು ಅವರ ವಾಸ್ತವಿಕ ಜ್ಞಾನಕ್ಕೆ ಸೀಮಿತವಾಗಿರುವುದಿಲ್ಲ,ಸಾಮಾನ್ಯ ವ್ಯವಹಾರದಲ್ಲಿ ಅವರು ತಿಳಿದುಕೊಳ್ಳಬೇಕಾದ ವಾಸ್ತವಿಕ ಸಂಗತಿಗಳಿಗೂ ವಿಸ್ತರಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ವಿಮಾದಾರನ ಆರೋಗ್ಯ ಸ್ಥಿತಿಯನ್ನು ದೃಢಪಡಿಸಿಕೊಂಡು ಪಾಲಿಸಿಯನ್ನು ವಿತರಿಸಿದ ಬಳಿಕ ವಿಮಾದಾರನು ಅರ್ಜಿಯಲ್ಲಿ ಘೋಷಿಸಿರುವ ಮತ್ತು ವಿಮೆ ಹಣವನ್ನು ಕೋರಿರುವ ನಿರ್ದಿಷ್ಟ ಅಪಾಯಕ್ಕೆ ಕಾರಣವಾಗಿರುವ ಅನಾರೋಗ್ಯವನ್ನು ಉಲ್ಲೇಖಿಸಿ ವಿಮಾ ಕಂಪನಿಗಳು ಹಕ್ಕು ಕೋರಿಕೆಯನ್ನು ನಿರಾಕರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ತಾನು ಅಮೆರಿಕದಲ್ಲಿದ್ದಾಗ ಮಾಡಿದ್ದ ವೈದ್ಯಕೀಯ ವೆಚ್ಚಗಳ ಪಾವತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ)ದ ಆದೇಶವನ್ನು ಪ್ರಶ್ನಿಸಿ ಮನಮೋಹನ ನಂದಾ ಎನ್ನುವವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.
ಅಮೆರಿಕಕ್ಕೆ ಪ್ರಯಾಣಿಸಲು ಉದ್ದೇಶಿಸಿದ್ದ ನಂದಾ ಯುನೈಟೆಡ್ ಇಂಡಿಯಾ ಇನ್ಶೂರನ್ಸ್ ಕಂಪನಿಯಿಂದ ಸಾಗರೋತ್ತರ ಮೆಡಿಕ್ಲೇಮ್ ವ್ಯವಹಾರ ಮತ್ತು ರಜಾ ಪಾಲಿಸಿಯನ್ನು ಖರೀದಿಸಿದ್ದರು.
ಸ್ಯಾನ್‌ಫ್ರಾನ್ಸಿಸ್ಕೋ ವಿಮಾನ ನಿಲ್ದಾಣವನ್ನು ತಲುಪಿದಾಗ ಹೃದಯಾಘಾತಕ್ಕೆ ಗುರಿಯಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಆಯಂಜಿಯೊಪ್ಲಾಸ್ಟಿ ನಡೆಸಿದ್ದ ವೈದ್ಯರು ಹೃದಯ ನಾಳಗಳಲ್ಲಿಯ ತಡೆಗಳನ್ನು ನಿವಾರಿಸಲು ಮೂರು ಸ್ಟೆಂಟ್‌ಗಳನ್ನು ಅಳವಡಿಸಿದ್ದರು.
ತಾನು ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಇತಿಹಾಸವನ್ನು ಹೊಂದಿದ್ದೇನೆ ಮತ್ತು ವಿಮೆ ಪಾಲಿಸಿಯನ್ನು ಖರೀದಿಸುವಾಗ ಇದನ್ನು ಘೋಷಿಸಿರಲಿಲ್ಲ ಎಂಬ ಕಾರಣವನ್ನು ನೀಡಿ ತನಗೆ ಚಿಕಿತ್ಸಾ ವೆಚ್ಚಗಳನ್ನು ಮರುಪಾವತಿಸಲು ಕಂಪನಿಯು ನಿರಾಕರಿಸಿದೆ ಎಂದು ನಂದಾ ಅರ್ಜಿಯಲ್ಲಿ ತಿಳಿಸಿದ್ದರು.
ದೂರುದಾರರು ಸ್ಟಾಟಿನ್ ಔಷಧಿಯನ್ನು ಸೇವಿಸುತ್ತಿದ್ದರು ಮತ್ತು ಮೆಡಿಕ್ಲೇಮ್ ಪಾಲಿಸಿಯನ್ನು ಖರೀದಿಸುವಾಗ ಇದನ್ನು ಬಹಿರಂಗಗೊಳಿಸಿರಲಿಲ್ಲ,ತನ್ನ ಆರೋಗ್ಯ ಸ್ಥಿತಿಯನ್ನು ಸಂಪೂರ್ಣವಾಗಿ ಬಹಿರಂಗ ಪಡಿಸಬೇಕಾದ ತನ್ನ ಕರ್ತವ್ಯದಲ್ಲಿ ಅವರು ವಿಫಲರಾಗಿದ್ದಾರೆ ಎಂದು ಎನ್ಸಿಡಿಆರ್ಸಿ ತನ್ನ ಆದೇಶದಲ್ಲಿ ಹೇಳಿತ್ತು.
ಆದಾಗ್ಯೂ,ಯುನೈಟೆಡ್ ಇಂಡಿಯಾ ಇನ್ಶೂರನ್ಸ್ ಕಂಪನಿಯ ನಿರಾಕರಣೆಯು ಕಾನೂನಿಗೆ ಅನುಗುಣವಾಗಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ನಿರೀಕ್ಷಿಸಿರದ ಮತ್ತು ಸನ್ನಿಹಿತವಾಗಿರದ ಹಾಗೂ ಸಾಗರೋತ್ತರದಲ್ಲಿ ಸಂಭವಿಸಬಹುದಾದ ದಿಢೀರ್ ಅನಾರೋಗ್ಯ ಅಥವಾ ಅಸ್ವಸ್ಥತೆಗೆ ಸಂಬಂಧಿಸಿದಂತೆ ನಷ್ಟ ಪರಿಹಾರವನ್ನು ಪಡೆಯುವುದು ಮೆಡಿಕ್ಲೇಮ್ ಪಾಲಿಸಿಯ ಖರೀದಿಯ ಉದ್ದೇಶವಾಗಿದೆ ಎಂದು ತಿಳಿಸಿದೆ.