ನವದೆಹಲಿ: ಪಾಕಿಸ್ತಾನದಿಂದ ಬರುವ ಕಲುಷಿತ ಗಾಳಿಯು ದೆಹಲಿಯ ವಾಯು ಗುಣಮಟ್ಟವನ್ನು ಕೆಡಿಸುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ದೆಹಲಿ ವಾಯು ಮಾಲಿನ್ಯದ ಬಗೆಗಿನ ವಿಚಾರಣೆಯ ವೇಳೆ ಈ ಮಾತು ಹೇಳಿದ ಸರ್ಕಾರಿ ವಕೀಲರು, ತಮ್ಮ ರಾಜ್ಯದ ಕಾರ್ಖಾನೆಗಳು ರಾಷ್ಟ್ರ ರಾಜಧಾನಿಯ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿಲ್ಲ ಎಂದು ವಾದಿಸಿದರು.
ಯುಪಿ ಸರ್ಕಾರದ ವಕೀಲರಾದ ರಣಜಿತ್ ಕುಮಾರ್, ರಾಜ್ಯದ ಕಾರ್ಖಾನೆಗಳ ಹೊಗೆಯು ಡೌನ್ವಿಂಡ್ ಆಗಿ ಕೆಳಕ್ಕೆ ಸಂಚರಿಸುತ್ತವೆ. ದೆಹಲಿಯ ಕಡೆಗೆ ಹೋಗುವುದಿಲ್ಲ ಎಂದು ವಾದಿಸಿದರು. ದೆಹಲಿ ಎನ್ಸಿಆರ್ ಮತ್ತು ಸುತ್ತಮುತ್ತಲ ಪ್ರದೇಶಗಳ ಕೈಗಾರಿಕೆಗಳ ಮೇಲೆ ಎಂಟು ಗಂಟೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ನಿರ್ಬಂಧ ವಿಧಿಸಿ ಯುಪಿಯ ಸಕ್ಕರೆ ಮತ್ತು ಹಾಲಿನ ಕಾರ್ಖಾನೆಗಳಿಗೆ ತೊಂದರೆ ಉಂಟಾಗುತ್ತದೆ ಎಂದ ಅವರು, ಪಾಕಿಸ್ತಾನದ ಕಡೆಯಿಂದ ಬರುತ್ತಿರುವ ಕಲುಷಿತ ಗಾಳಿ ದೆಹಲಿಯ ಹವಾ ಹಾಳಾಗಲು ಕಾರಣವಾಗಿದೆ ಎಂದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, 'ಹಾಗಿದ್ದರೆ, ನಾವು ಪಾಕಿಸ್ತಾನದ ಕಾರ್ಖಾನೆಗಳನ್ನು ನಿಷೇಧಿಸಬೇಕು ಎಂದು ಕೇಳುತ್ತಿದ್ದೀರಾ?' ಎಂದು ಕೇಳಿದರು.