ತಿರುವನಂತಪುರಂ: ಕೇರಳ ಸರ್ಕಾರ ತೀವ್ರವಾದ ವಿವಾದಕ್ಕೆ ಗುರಿಯಾಗಿದ್ದು, ಸಚಿವರೊಬ್ಬರಿಗಾಗಿ ನೂತನ ಶೌಚಾಲಯಕ್ಕೆ ಸರ್ಕಾರಿ ಯೋಜನೆಯ ಮನೆಯ ನಿರ್ಮಾಣದ ವೆಚ್ಚಕ್ಕಿಂತಲೂ ಹೆಚ್ಚು ಹಣ ಬಿಡುಗಡೆ ಮಾಡಿದೆ.
ಲೈಫ್ ಮಿಷನ್ ಯೋಜನೆಯ ಸರ್ಕಾರಿ ಯೋಜನೆಯಡಿ ನಿರ್ಮಾಣ ಮಾಡುವ ಮನೆಗಳಿಗೆ 4 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತದೆ. ಆದರೆ ಸರ್ಕಾರ ತನ್ನ ಸಚಿವರಿಗೆ ನೂತನ ಶೌಚಾಲಯ ನಿರ್ಮಾಣ ಮಾಡುವುದಕ್ಕೆ 4.10 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿದೆ.
ಡಿ.21 ರಂದು ಸಾಮಾನ್ಯ ಆಡಳಿತ ಇಲಾಖೆ ಆದೇಶ ಹೊರಡಿಸಿದ್ದು ವಿವಾದಕ್ಕೆ ದಾರಿ ಮಾಡಿಕೊಟ್ಟಿವೆ.
ರಾಜ್ಯ ಮೀನುಗಾರಿಕೆ ಸಚಿವ ಸಜಿ ಚೆರಿಯನ್ ಅವರಿಗೆ ಈ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಸಿಪಿಐ-ಎಂ ನಿಂದ ಆಯ್ಕೆಯಾಗಿದ್ದ ಶಾಸಕರನ್ನು ಪಿಣರಾಯಿ ವಿಜಯನ್ ಸರ್ಕಾರ ಎರಡನೇ ಅವಧಿಯಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಅಚ್ಚರಿ ಮೂಡಿಸಿತ್ತು.
ಚೆರಿಯನ್ (56) 2018 ರಲ್ಲಿ ಅಳಪ್ಪುಳ ಜಿಲ್ಲೆಯ ಚೆಂಗನೂರ್ ವಿಧಾನಸಭಾ ಕ್ಷೇತ್ರದ ಅಂದಿನ ಹಾಲಿ ಸಚಿವ ಕೆ.ಕೆ ರಾಮಚಂದ್ರನ್ ನಾಯರ್ ಸಾವನ್ನಪ್ಪಿದ ನಂತರ ಚುನಾವಣೆ ಎದುರಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಇವರು ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದರೂ ಸಚಿವರಿಗೆ ಐಷಾರಾಮಿ ಶೌಚಾಲಯ ನಿರ್ಮಾಣ ಮಾಡಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಇದು ಎಲ್ಲಾ ರಾಜಕೀಯ ಪಕ್ಷಗಳ ಅವಧಿಯಲ್ಲೂ ನಡೆದಿದೆ. ಹಿಂದೆಲ್ಲಾ ಎಡ ಪಕ್ಷಗಳು ಈ ರೀತಿಯ ಅನಾವಶ್ಯಕ ಖರ್ಚುಗಳಿಗೆ ಮುಂದಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅದು ಇತಿಹಾಸ, ಎಡಪಕ್ಷ ಬೇರೆ ಯಾವ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.