ಅಂಬೆಗಾಲಿಡುತ್ತಿರುವ ಮಕ್ಕಳು ಹಾಗೂ ಬೆಳೆಯುತ್ತಿರುವ ಪುಟಾಣಿಗಳ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ ಎಂಬ ಆತಂಕಕಾರಿ ಮಾಹಿತಿ ಹೊರಹಾಕಿದೆ. ತಾಯಂದಿರು ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಸಿದಂತೆಲ್ಲಾ ಅವರ ಮತ್ತು ಮಕ್ಕಳ ನಡುವಿನ ಸಂವಹನವು ನಾಲ್ಕು ಪಟ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ‘ಚೈಲ್ಡ್ ಡೆವಲಪ್‌ಮೆಂಟ್ ಜರ್ನಲ್’ನಲ್ಲಿ ಸಂಶೋಧನೆ ಪ್ರಕಟವಾಗಿದೆ. ಹೊಸ ಅಧ್ಯಯನದ ನೇತೃತ್ವವನ್ನು ಟೆಲ್ ಅವಿವ್ ವಿಶ್ವವಿದ್ಯಾಲಯದ ಸ್ಟಾನ್ಲಿ ಸ್ಟೇಯರ್ ಸ್ಕೂಲ್ ಆಫ್ ಹೆಲ್ತ್ ಪ್ರೊಫೆಷನ್‌ನಲ್ಲಿ ಸಂವಹನ ಅಸ್ವಸ್ಥತೆ ವಿಭಾಗದ ಡಾ.ಕೇಟಿ ಬೊರೊಡ್ಕಿನ್ ಅವರು ವಹಿಸಿಕೊಂಡಿದ್ದರು.
ಅಧ್ಯಯನ ಹೇಗೆ ನಡೆಯಿತು?
ಪ್ರಯೋಗವನ್ನು ಅಂಬೆಗಾಲಿಡುವ (ಎರಡರಿಂದ ಮೂರು ವರ್ಷ ವಯಸ್ಸಿನ) ಮಕ್ಕಳು ಮತ್ತು ತಾಯಂದಿರನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗಿದೆ. ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಪರೀಕ್ಷಿಸುವ ಅಧ್ಯಯನದಲ್ಲಿ ಭಾಗವಹಿಸಲು ತಾಯಂದಿರನ್ನು ಆಹ್ವಾನಿಸಲಾಯಿತು. ಅವರಿಗೆ ಮೂರು ಕಾರ್ಯಗಳನ್ನು ಮಾಡಲು ಕೇಳಲಾಗಿತ್ತು. ಅವುಗಳೆಂದರೆ, ಗೊತ್ತುಪಡಿಸಿದ ಫೇಸ್‌ಬುಕ್ ಪುಟವನ್ನು ಬ್ರೌಸ್ ಮಾಡಿ ಮತ್ತು ಅವರಿಗೆ ಆಸಕ್ತಿಯಿರುವ ವಿಡಿಯೊಗಳು ಮತ್ತು ಲೇಖನಗಳನ್ನು ಲೈಕ್ ಮಾಡಬೇಕು. ಎರಡು, ಮುದ್ರಿತ ನಿಯತಕಾಲಿಕೆಗಳನ್ನು ಓದಬೇಕು ಮತ್ತು ಅವರಿಗೆ ಆಸಕ್ತಿಯಿರುವ ಲೇಖನಗಳನ್ನು ಗುರುತಿಸಬೇಕು. ಮೂರನೆಯದಾಗಿ, ಸ್ಮಾರ್ಟ್‌ಫೋನ್ ಮತ್ತು ನಿಯತಕಾಲಿಕೆಗಳನ್ನು ಬದಿಗಿಟ್ಟು ಮಗುವಿನೊಂದಿಗೆ ಆಟವಾಡಿ (ಯಾವುದೇ ನಿಯಮಗಳಿಲ್ಲದ ಮನಃಪೂರ್ವಕ ಆಟ).
ಅಧ್ಯಯನದ ಉದ್ದೇಶವೇನಾಗಿತ್ತು?
‘‘ನಿಜ ಜೀವನದಲ್ಲಿ ತಾಯಿ ತನ್ನ ಮಗುವನ್ನು ನೋಡಿಕೊಳ್ಳಬೇಕಾದ ಸಂದರ್ಭಗಳನ್ನೇ ಅಧ್ಯಯನದಲ್ಲೂ ಇರುವಂತೆ ನೋಡಿಕೊಳ್ಳಲಾಗಿತ್ತು. ಅದೇ ಸಮಯದಲ್ಲಿ ತಾಯಂದಿರು ಸಾಮಾನ್ಯ ಜೀವನದಲ್ಲಿ ಸ್ಮಾರ್ಟ್ ಫೋನ್ ಬಳಸಬಹುದಾದ ಸಾಧ್ಯತೆ ಗಮನದಲ್ಲಿಟ್ಟುಕೊಂಡು, ಅಂತಹ ವಾತಾವರಣ ಸೃಷ್ಟಿಸಿ ಅಧ್ಯಯನ ನಡೆಸಿದೆವು ಎಂದು ಡಾ ಕೇಟಿ ಬೊರೊಡ್ಕಿನ್ ವಿವರಿಸಿದರು.
ತಾಯಂದಿರಿಗೆ ಸಂಶೋಧನೆಯ ಉದ್ದೇಶವನ್ನು ಮೊದಲಿಗೆ ತಿಳಿಸಿರಲಿಲ್ಲ. ಇದರಿಂದ ಅವರು ಸ್ವಾಭಾವಿಕವಾಗಿ ವರ್ತಿಸಿದರು. ಆದ್ದರಿಂದಲೇ ನಿಯತಕಾಲಿಕೆಗಳು, ಸ್ಮಾರ್ಟ್ಫೋನ್ಗಳು ಹಾಗೂ ಮಕ್ಕಳ ಕುರಿತು ಅವರು ತಮ್ಮ ನೈಜ ಆಸಕ್ತಿಯನ್ನು ತೋರಿಸಿದರು. ಅಧ್ಯಯನದ ಉದ್ದೇಶಕ್ಕಾಗಿ ಈ ಎಲ್ಲವನ್ನೂ ವಿಡಿಯೋ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಅಧ್ಯಯನದಿಂದ ಕಂಡುಬಂದಿದ್ದೇನು?
ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು ತಾಯಿ-ಮಗುವಿನ ಪರಸ್ಪರ ಸಂವಹನದ ಮೂರು ಅಂಶಗಳನ್ನು ವ್ಯಾಖ್ಯಾನಿಸಿದ್ದಾರೆ. ತಾಯಿ ತನ್ನ ಮಗುವಿನೊಂದಿಗೆ ಹೇಗೆ ಮಾತನಾಡುತ್ತಾಳೆ ಎಂಬುದನ್ನು ಮೊದಲು ಪರೀಕ್ಷಿಸಲಾಯಿತು. ಅಂದರೆ ತಾಯಿ ಮಗುವಿನೊಂದಿಗೆ ಸಂಜ್ಞೆ, ಪದಗಳು, ಶಬ್ಧಗಳು, ಭಾಷೆಯ ಮುಖಾಂತರ ಸಂವಹನ ನಡೆಸುವುದು. ಇಂತಹ ಸಂವಹನ ಮಗುವಿನ ಭಾಷಾ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಆದರೆ ಈ ಸಂವಹನ ಕಡಿಮೆಯಾದರೆ, ಮಗುವಿನ ಶಬ್ಧಕೋಶವೂ ಸಂಕುಚಿತವಾಗುತ್ತದೆ.
ಮುಂದೆ, ಮಾತು ಎಷ್ಟು ಸಂವಾದಾತ್ಮಕವಾಗಿದೆ ಎಂಬುದನ್ನು ಪರೀಕ್ಷಿಸಲಾಯಿತು. ಇದು ಮಗುವಿನ ಭಾಷೆ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತದೆ. ಅಂತಿಮವಾಗಿ, ಮಗುವಿನ ಪ್ರಶ್ನೆಗಳಿಗೆ ತಾಯಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸಲಾಯಿತು. ಉದಾಹರಣೆಗೆ, ಮಗು ‘ನೋಡಿ, ಟ್ರಕ್’ ಎಂದು ಹೇಳಿದಾಗ, ‘ಹೌದು, ಅದು ಅದ್ಭುತವಾಗಿದೆ’ ಎಂಬ ಪ್ರತಿಕ್ರಿಯೆ ಒಂದು ರೀತಿಯಾದರೆ, ‘ಕರೆಕ್ಟ್, ಇದು ನಾವು ನಿನ್ನೆ ನೋಡಿದಂತಹ ಕೆಂಪು ಟ್ರಕ್’ ಎಂಬುದು ಮತ್ತೊಂದು ಪ್ರತಿಕ್ರಿಯೆ. ಇಂತಹ ಸಂವಹನ ಮಗುವಿನ ಭಾಷೆ, ಸಾಮಾಜಿಕ, ಭಾವನಾತ್ಮಕ ಹಾಗೂ ಅರಿವಿನ ಬೆಳವಣಿಗೆಗೆ ಕಾರಣವಾಗುತ್ತದೆ. ಇದನ್ನು ಗಮನಿಸಲಾಯಿತು.
ಸಂಶೋಧನೆಯಲ್ಲಿ ತಾಯಂದಿರು ಸ್ಮಾರ್ಟ್ಫೋನ್ನೊಂದಿಗಿದ್ದಾಗ ಕಂಡುಬಂದಿದ್ದೇನು?
ಅಧ್ಯಯನದಲ್ಲಿ ಕಂಡುಬಂದಿದ್ದೇನೆಂದರೆ, ಮಗುವಿನೊಂದಿಗಿನ ಅಪರಿಮಿತ ಆಟದ ಸಮಯದಲ್ಲಿ ತಾಯಿ ಸಾಕಷ್ಟು ತಲ್ಲೀನಳಾಗಿರುತ್ತಾಳೆ. ಅದೇ ಮುದ್ರಿತ ನಿಯತಕಾಲಿಕೆಗಳನ್ನು ಓದುವಾಗ ಮತ್ತು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸ್ ಮಾಡುವಾಗ ತಾಯಿ ಮಗುವಿನೊಂದಿಗೆ ಸಂವಾದವನ್ನು ಕಡಿಮೆ ಮಾಡುತ್ತಾಳೆ. ಈ ಸಂದರ್ಭದಲ್ಲಿ ತಾಯಿ- ಮಗುವಿನ ಪರಸ್ಪರ ಸಂವಹನ ಕಡಿಮೆಯಿರುತ್ತದೆ ಎಂದು ಸಂಶೋಧಕ ಡಾ.ಬೊರೊಡ್ಕಿನ್ ಹೇಳಿದ್ದಾರೆ.
ಇದನ್ನೇ ಸುಲಭವಾಗಿ ವಿವರಿಸುವುದಾದರೆ, ತಾಯಂದಿರು ತಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ಮಕ್ಕಳೊಂದಿಗೆ ನಾಲ್ಕು ಪಟ್ಟು ಕಡಿಮೆ ಮಾತನಾಡುತ್ತಾರೆ. ಹಾಗೂ ಮಕ್ಕಳ ಪ್ರತಿಕ್ರಿಯೆಗೆ ವಿಷಯಕ್ಕೆ ಅನುಗುಣವಾದಷ್ಟೇ ಪ್ರತಿಕ್ರಿಯೆ ನೀಡಿದರು. ಬಹಳಷ್ಟು ಬಾರಿ ಮಕ್ಕಳ ಪ್ರಶ್ನೆಯನ್ನು ನಿರ್ಲಕ್ಷಿಸಿದರು. ಫೇಸ್‌ಬುಕ್ ಬ್ರೌಸ್ ಮಾಡುವಾಗ ಅವರು ಪ್ರತಿಕ್ರಿಯಿಸಲು ಸಾಧ್ಯವಿದ್ದರೂ, ಪ್ರತಿಕ್ರಿಯೆಯ ಗುಣಮಟ್ಟ ಕಡಿಮೆಯಾಗಿತ್ತು. ಗಮನಾರ್ಹ ಅಂಶವೆಂದರೆ, ಮಕ್ಕಳೊಂದಿಗಿನ ಸಂವಾದವನ್ನು ಯಾವ ತಾಯಂದಿರೂ ತಪ್ಪಿಸಿಲ್ಲ. ಆದರೆ ಫೋನ್ ಬಳಸುವಾಗ ಅವರು ಸಂವಹನವನ್ನು ಆದಷ್ಟು ಕಡಿಮೆಗೊಳಿಸಿ, ಮತ್ತೆ ಫೋನ್ನಲ್ಲಿ ತಲ್ಲೀನರಾದರು ಎಂದು ಅಧ್ಯಯನ ತಿಳಿಸಿದೆ.
ಇಲ್ಲಿಯವರೆಗಿನ ಅಧ್ಯಯನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ದಾಸರಾದರೆ ಅವರ ಬೆಳವಣಿಗೆಗೆ ಎಂತಹ ಪರಿಣಾಮ ಆಗುತ್ತದೆ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ನಡೆಸಲಾಗಿರುವ ಅಧ್ಯಯನ ಭಿನ್ನವಾಗಿದ್ದು, ಪೋಷಕರ ಮೊಬೈಲ್ ಗೀಳು ಮಕ್ಕಳಲ್ಲಿ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲಾಗಿದೆ.
ಈ ಅಧ್ಯಯನ ಕೇವಲ ತಾಯಿಗೆ ಮಾತ್ರವಲ್ಲ, ತಂದೆಗೂ ಅನ್ವಯ: ಸಂಶೋಧಕರು
ಡಾ.ಬೊರೊಡ್ಕಿನ್ ಸಂಶೋಧನೆಯ ಕುರಿತು ಮತ್ತೊಂದು ಆಸಕ್ತಿದಾಯಕ ಅಂಶ ಹೊರಹಾಕಿದ್ದಾರೆ. ಅವರು ಹೇಳುವಂತೆ ಸ್ಮಾರ್ಟ್ಫೋನ್ಗಳು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ನಡೆಸಲಾಗಿದೆ. ಆದರೆ ಇದು ಕೇವಲ ತಾಯಂದಿರಿಗೆ ಸೀಮಿತವಲ್ಲ. ಅವರ ಸ್ಥಾನದಲ್ಲಿ ತಂದೆಯಿದ್ದರೂ ಮಕ್ಕಳೊಂದಿಗಿನ ಸಂವಹನ ಕಡಿಮೆಯೇ ಆಗಿರುತ್ತದೆ. ಮತ್ತು ಸಂಶೋಧನೆಯ ಫಲಿತಾಂಶಗಳು ಇಬ್ಬರಿಗೂ ಅನ್ವಯವಾಗುತ್ತದೆ. ಆದ್ದರಿಂದ ಪೋಷಕರು ಅಂಬೆಗಾಲಿಡುವ ಮಕ್ಕಳ ಬೆಳವಣಿಗೆಗೆ ಗಮನ ಹರಿಸುವುದು ಅವಶ್ಯಕ ಎಂದಿದ್ದಾರೆ.