ಅಲಪ್ಪುಳ: ಕೇರಳದಲ್ಲಿ ಮುಸ್ಲಿಂ ಸಂಘಟನೆಯಾದ ಎಸ್‌ಡಿಪಿಐ ಮತ್ತು ಬಿಜೆಪಿ ನಡುವಿನ ರಾಜಕೀಯ ದ್ವೇಷಕ್ಕೆ ಭಾನುವಾರ ಕೆಲವೇ ಗಂಟಗಳ ಅಂತರದಲ್ಲಿ ಉಭಯ ಪಕ್ಷಗಳ ಇಬ್ಬರು ಮುಖಂಡರ ಕೊಲೆ ನಡೆದಿದೆ.
ಆಲಪ್ಪುಳ ಜಿಲ್ಲೆಯಲ್ಲಿ ಈ ಎರಡೂ ಕೊಲೆ ನಡೆದಿದ್ದು, ಶನಿವಾರ ತಡರಾತ್ರಿ ಮುಸ್ಲಿಂ ಪಕ್ಷದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಎ ಎಸ್ ಶಾನ್(38) ಅವರನ್ನು ಕೊಲೆ ಮಾಡಿದ ನಂತರ, ಇಂದು ಬೆಳಗಿನ ಜಾವ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರೆಂಜಿತ್ ಶ್ರೀನಿವಾಸನ್(40) ಅವರ ಮನೆಗೆ ನುಗ್ಗಿದ ಜನರ ಗುಂಪೊಂದು ಅವರನ್ನು ಹತ್ಯೆ ಮಾಡಿದೆ. ಎಸ್‌ಡಿಪಿಐ ಪಿಎಫ್‌ಐನ ರಾಜಕೀಯ ಸಂಘಟನೆಯಾಗಿದೆ.
ಎರಡು ಕೊಲೆಯ ನಂತರ ಪರಿಸ್ಥಿತಿ ಉದ್ವಿಗ್ನ ಗೊಂಡಿರುವುದರಿಂದ, ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಅಲಪ್ಪುಳ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿನ್ನೆ ರಾತ್ರಿ ಅಲಪ್ಪುಳದ ಮನ್ನಂಚೇರಿ ಬಳಿಯ ಪೊನ್ನಾಡ್ ಎಂಬಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಶಾನ್ ಅವರಿಗೆ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿದ ದುಷ್ಕರ್ಮಿಗಳು, ಎಸ್ ಡಿಪಿಐ ನಾಯಕ ಕೆಳಗೆ ಬೀಳುತ್ತಿದ್ದಂತೆಯೇ ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇದು ಪ್ರತೀಕಾರದ ದಾಳಿಯಂತೆ ತೋರುತ್ತಿದೆ. ಅಲಪ್ಪುಳ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ರೆಂಜಿತ್ ಅವರ ಮನೆಗೆ ನುಗ್ಗಿದ ಜನರ ಗುಂಪು ಅವರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ರೆಂಜಿತ್ 2016ರ ಚುನಾವಣೆಯಲ್ಲಿ ಅಲಪ್ಪುಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.