ಕೋಲ್ಕತ್ತ: ಕೊರೊನಾ ವೈರಸ್ ಸಂಬಂಧಿತ ನಿರ್ಬಂಧಗಳನ್ನು ಎಲ್ಲೆಡೆ ಹೇರಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಕೋವಿಡ್ ನಿರ್ಬಂಧ ಹೇರುವುದರಿಂದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮಮತಾ ಹೇಳಿದ್ದಾರೆ.
'ಬ್ರಿಟನ್‌ನಿಂದ ಬರುವ ಜನರಲ್ಲಿ ಹೆಚ್ಚಿನ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಓಮೈಕ್ರಾನ್ ಪ್ರಕರಣ ಅಂತರರಾಷ್ಟ್ರೀಯ ವಿಮಾನಗಳ ಮೂಲಗಳಿಂದ ಬರುತ್ತಿವೆ ಎಂಬುದು ಸತ್ಯ. ಓಮೈಕ್ರಾನ್ ಪ್ರಕರಣಗಳು ಹೆಚ್ಚಿರುವ ದೇಶಗಳ ವಿಮಾನಗಳ ಮೇಲೆ ನಿರ್ಬಂಧಗಳನ್ನು ಹೇರುವ ಬಗ್ಗೆ ಕೇಂದ್ರ ಸರ್ಕಾರವು ನಿರ್ಧರಿಸಬೇಕು' ಎಂದು ಹೇಳಿದರು.
'ನಾವು ಜನರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹೆಚ್ಚು ಪ್ರಕರಣ ಕಂಡುಬರುವ ಸ್ಥಳಗಳನ್ನು ಗುರಿಯಾಗಿಸಲಿದ್ದೇವೆ. ನಾವು ಎಲ್ಲೆಡೆ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ. ಏಕೆಂದರೆ ಸಾಂಕ್ರಾಮಿಕ ರೋಗದ ಕಳೆದ ಎರಡು ವರ್ಷಗಳಂತೆ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬುಧವಾರದಂದು 1,089 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ಕೋಲ್ಕತ್ತದಲ್ಲಿ 540 ಪ್ರಕರಣಗಳು ದಾಖಲಾಗಿವೆ.
'ಕೋಲ್ಕತ್ತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ರೈಲು ಹಾಗೂ ವಿಮಾನಗಳು ಪ್ರಸರಣ ಕೇಂದ್ರಗಳಾಗಿವೆ. ಈ ಸಂದರ್ಭದಲ್ಲಿ ಎಲ್ಲರಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ನಾನು ವಿನಂತಿ ಮಾಡುತ್ತೇನೆ' ಎಂದು ಹೇಳಿದರು.