ತಿರುವನಂತಪುರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಾಳೆ ಕೇರಳಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಕಣ್ಣೂರಿಗೆ ಆಗಮಿಸುವ ರಾಷ್ಟ್ರಪತಿಗಳು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು.ಬಳಿಕ ಕಣ್ಣೂರು ವಿಮಾನ ನಿಲ್ದಾಣದಿಂದ ಕೊಚ್ಚಿ ನೇವಲ್ ಏರ್ ಬೇಸ್ ಗೆ ತೆರಳುವರು.
22ರಂದು ಬೆಳಗ್ಗೆ 9.50ಕ್ಕೆ ದಕ್ಷಿಣ ಪ್ರಾದೇಶಿಕ ನೌಕಾ ಕಮಾಂಡ್‌ನ ಕಾರ್ಯಕ್ರಮದಲ್ಲೂ ರಾಷ್ಟ್ರಪತಿ ಪಾಲ್ಗೊಳ್ಳಲಿದ್ದಾರೆ. ನಂತರ ವಿಕ್ರಾಂತ್ ಸೆಲ್ ಗೆ ಭೇಟಿ ನೀಡಲಿದ್ದಾರೆ. 23ರಂದು ಬೆಳಗ್ಗೆ 10.20ಕ್ಕೆ ಕೊಚ್ಚಿಯಿಂದ ಹೊರಟು 11 ಗಂಟೆಗೆ ತಿರುವನಂತಪುರಂ ವಿಮಾನ ನಿಲ್ದಾಣ ತಲುಪಲಿದೆ. ಬೆಳಗ್ಗೆ 11.30ಕ್ಕೆ ಪೂಜಾಪುರದಲ್ಲಿ ಪಿ.ಎನ್.ಪಣಿಕ್ಕರ್ ಅವರ ಕಂಚಿನ ಪ್ರತಿಮೆಯನ್ನು ರಾಷ್ಟ್ರಪತಿಗಳು ಅನಾವರಣಗೊಳಿಸಲಿದ್ದಾರೆ. 24ರಂದು ಬೆಳಗ್ಗೆ ತಿರುವನಂತಪುರಂನ ರಾಜಭವನ್ ನಿಂದ ವಿಮಾನ ನಿಲ್ದಾಣಕ್ಕೆ ತೆರಳಿ, ಬೆಳಗ್ಗೆ 9.50ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ.