ಕಾಸರಗೋಡು: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜರುಗಿತು. ಸಂಘಟನೆ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಪ್ರಭಾಕರ ಕಲ್ಲೂರಾಯ, ಉದ್ಯಮಿ ಇಬ್ರಾಹಿಂ ಮದಕ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಂಘಟನೆ ಮುಂದಿಯ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸಂಘಟನೆ ಮೂಲಕ ಹಸನ್-ಹವ್ವಾ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಗಡಿನಾಡಿನಲ್ಲಿ ಗ್ರಾಮೀಣ ವರದಿಗಾರಿಕೆಗಾಗಿ ದತ್ತಿನಿಧಿ ಪ್ರಶಸ್ತಿ ನೀಡುವುದು, ಕಲಬುರ್ಗಿಯಲ್ಲಿ ನಡೆಯಲಿರುವ ಕೆಯುಡಬ್ಲ್ಯೂಜೆ ವಾರ್ಷಿಕ ಸಮ್ಮೇಳನದಲ್ಲಿ ಕಾಸರಗೋಡು ಘಟಕದಿಂದ ಸದಸ್ಯರು ಪಾಲ್ಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಂಘಟನೆ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಲೆಕ್ಕಪತ್ರ ಮಂಡಿಸಿದರು. ಸಂಘಟನೆ ನಿಕಟಪೂರ್ವ ಅಧ್ಯಕ್ಷ, ಕೆಯುಡಬ್ಲ್ಯೂಜೆಯ ಮಾ. ರಾಮಮೂರ್ತಿ ಸ್ಮಾರಕ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅಚ್ಯುತ ಚೇವಾರ್ ಅವರನ್ನು ಸಂಘಟನೆ ವತಿಯಿಂದ ಅಭಿನಂದಿಸಲಾಯಿತು. ಪತ್ರಕರ್ತರವಿ ನಾಯ್ಕಾಪು ಅಭಿಪ್ರಾಯ ಮಂಡಿಸಿದರು.