HEALTH TIPS

ರಾಘವೇಶ್ವರ ಭಾರತೀ ಶ್ರೀ ವಿರುದ್ಧ ಸಲ್ಲಿಸಿದ್ದ ತೀರ್ಪು ಮರುಪರಿಶೀಲನೆ ಅರ್ಜಿ ವಜಾ

             ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.

                 ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆ ಮತ್ತು ಅಪರಾಧ ತನಿಖಾ ವಿಭಾಗ (ಸಿಐಡಿ) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಮನವಿಗಳನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠ ತಿರಸ್ಕರಿಸಿದೆ.
               ದೂರುದಾರೆಯಾದ ಸಂತ್ರಸ್ತೆಯು ತೀರ್ಪು ಪರಿಶೀಲನಾ ಮನವಿ ಸಲ್ಲಿಸಲಾಗದು ಮತ್ತು ಸಿಐಡಿ ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ಠಾಣೆಯ ಉಸ್ತುವಾರಿ ಹೊತ್ತಿರುವ ಅಧಿಕಾರಿ ಆರೋಪ ಪಟ್ಟಿ ಸಲ್ಲಿಸದಿರುವುದರಿಂದ ಸಿಐಡಿ ವರದಿಯನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದ್ದು, ತೀರ್ಪು ಮರುಪರಿಶೀಲನಾ ಮನವಿಗಳನ್ನು ವಜಾ ಮಾಡಿದೆ.
              ಈ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸಿದ್ದ ಹಲವು ನ್ಯಾಯಮೂರ್ತಿಗಳು ವೈಯಕ್ತಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಗೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 
                ಪ್ರಕರಣದ ಹಿನ್ನೆಲೆ:
            ರಾಮಕಥಾ ಗಾಯಕಿಯಾದ ಸಂತ್ರಸ್ತೆ 2014ರಲ್ಲಿ ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠಾಧಿಪತಿಯಾದ ಆರೋಪಿ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀ ಸ್ವಾಮೀಜಿ ಅಲಿಯಾಸ್‌ ಹರೀಶ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.
              ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(ಎಫ್‌) (ಅತ್ಯಾಚಾರ), 376(2)(ಎನ್‌) (ಬೆದರಿಸಿ ಬಲವಂತದ ಸಂಭೋಗ), 506 (ಕ್ರಿಮಿನಲ್‌ ಬೆದರಿಕೆ) ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ. ಮುದಿಗೌಡರ್ ಆರೋಪಿಯಾದ ರಾಘವೇಶ್ವರ ಸ್ವಾಮೀಜಿಯವರಿಗೆ ಕಿರುಕುಳ ನೀಡಲು ಮತ್ತು ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿ, ಸ್ವಾಮೀಜಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ, 2016 ಮಾರ್ಚ್‌ 31ರಂದು ತೀರ್ಪು ಪ್ರಕಟಿಸಿದ್ದರು.
            ವಿಷಯವನ್ನು ಯಾರಿಗೂ ಬಹಿರಂಗಪಡಿಸಬಾರದು ಎಂದು ದೇವರ ಮೇಲೆ ಶಪಥ ಮಾಡಿಸಿ ಸ್ವಾಮೀಜಿ ತಮ್ಮ ಮೇಲೆ 169 ಬಾರಿ ಸಂಭೋಗ ನಡೆಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದು ಅಸಹಜ. ವಂಶವಾಹಿಗೆ ಸಂಬಂಧಿಸಿದ (ಡಿಎನ್‌ಎ) ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ನೀಡಿದ್ದ ವ್ಯಕ್ತಿಯು ನಿರ್ದಿಷ್ಟ ಅರ್ಹತೆಯನ್ನು ಹೊಂದಿಲ್ಲದಿರುವುದರಿಂದ ಈ ವರದಿಯನ್ನು ಆಧರಿಸಲಾಗದು. ಡಿಎನ್‌ಎ ವರದಿ ನೀಡಿದ ಎಫ್‌ಎಸ್‌ಎಲ್‌ ಘಟಕಕ್ಕೆ ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯು ಮಾನ್ಯತೆ ನೀಡಿಲ್ಲ. ಏಪ್ರಿಲ್ 15, 1974ರಂದು ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸುವ ಅಧಿಕಾರವಿಲ್ಲ. ಇದು ಸಿಆರ್‌ಪಿಸಿಗೆ ವಿರುದ್ಧವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು. ತನಿಖಾ ಸಂಸ್ಥೆಯಾದ ಸಿಐಡಿಯು ನ್ಯಾಯಸಮ್ಮತವಾಗಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯುವ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸಿಲ್ಲ. ಆ ಮೂಲಕ ಮಠ ಮತ್ತು ಸ್ವಾಮೀಜಿಯ ವಿರುದ್ಧ ಇರುವವರ ಪರವಾಗಿ ಕೆಲಸ ಮಾಡಿದ್ದು, ಆರೋಪಿಗಳಾದ ಮುಗ್ಧರಿಗೆ ಕಿರುಕುಳ ನೀಡಲಾಗಿದೆ. ಮೊದಲ ಬಾರಿಗೆ ಘಟನೆ ನಡೆದ ಮೂರು ವರ್ಷಗಳ ಬಳಿಕ ಸಂತ್ರಸ್ತೆಯು ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದರು ಎಂಬ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಅಂಶಗಳನ್ನು ಒಳಗೊಂಡಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ2016ರ ಮೇ 2ರಂದು ರಾಮಕಥಾ ಗಾಯಕಿ ಮತ್ತು ಸಿಐಡಿ ಕಡೆಯಿಂದ ಮನವಿ ಸಲ್ಲಿಕೆಯಾಗಿತ್ತು. ಈಗ ಮನವಿ ವಜಾಗೊಂಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries