HEALTH TIPS

ಜಾಗತಿಕ ಸಮಸ್ಯೆಯಾಗಿ ಬೆಳೆದ ಹಣದುಬ್ಬರ!

             ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಬಹಳ ಹೆಚ್ಚಾಗಿದೆ. ಅಮೆರಿಕಾ, ಯೂರೋಪ್, ಚೀನಾ, ಜಪಾನ್, ಭಾರತ ಹೀಗೆ ಎಲ್ಲಾ ದೇಶಗಳ ಕಥೆಯ ಸಾರ ಒಂದೇ ಇದೆ. ಸೇವೆ ಮತ್ತು ಸರಕುಗಳ ಮೇಲಿನ ಬೆಲೆ "ಇಂದು ಇದ್ದದ್ದು ನಾಳೆಯಿಲ್ಲ" ಎನ್ನುವ ಮಟ್ಟಕ್ಕೆ ಹೆಚ್ಚಾಗುತ್ತಾ ಸಾಗಿದೆ. ಅದರಲ್ಲೂ ಚೀನಾ ಮತ್ತು ಅಮೇರಿಕಾ ದೇಶದಲ್ಲಿ ದಶಕಗಳಲ್ಲಿ ಕಾಣದ ಹಣದುಬ್ಬರ ಕಾಣಸಿಗುತ್ತಿದೆ.

            ನಿಮಗೆಲ್ಲಾ ಗೊತ್ತಿರುವಂತೆ ಚೀನಾ ಜಗತ್ತಿಗೆ ವಸ್ತುಗಳನ್ನ ಸರಬರಾಜು ಮಾಡುವ ಕಾರ್ಖಾನೆ ಇದ್ದಂತೆ. ಹೀಗೆ ವಸ್ತುಗಳನ್ನ ತಯಾರಿಸುವ ಹಂತದಲ್ಲೇ ಅದರ ಬೆಲೆ ಹೆಚ್ಚಾದರೆ? ಅಂದರೆ ಕಾಸ್ಟ್ ಆಫ್ ಪ್ರೊಡಕ್ಷನ್ ಹೆಚ್ಚಾದರೆ? ಆಗ ವಿಧಿಯಿಲ್ಲದೇ ಮಾರಾಟದ ಬೆಲೆಯನ್ನ ಕೂಡ ಹೆಚ್ಚಿಸಬೇಕಾಗುತ್ತದೆ. ಚೀನಾದಲ್ಲಿ ಈಗ ಆಗುತ್ತಿರುವುದು ಇದೆ.

           ಚೀನಾದ ನ್ಯಾಷನಲ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳುವ ಪ್ರಕಾರ ಕಳೆದ ವರ್ಷ ಅಕ್ಟೋಬರ್ ನಲ್ಲಿ ಇದ್ದ ಪ್ರೊಡ್ಯೂಸರ್ಸ್ ಪ್ರೈಸ್ ಇಂಡೆಕ್ಸ್ ಗಿಂತ ಈ ವರ್ಷದ ಇಂಡೆಕ್ಸ್ ಬರೋಬ್ಬರಿ 13.5 ಪ್ರತಿಶತ ಏರಿಕೆಯನ್ನ ಕಂಡಿದೆ. ಕೇವಲ ತಿಂಗಳ ಹಿಂದೆ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಇದು 10.7 ಪ್ರತಿಶತ ಇತ್ತು. ಅಂದರೆ ಕೇವಲ ತಿಂಗಳಲ್ಲಿ ಹೆಚ್ಚು ಕಡಿಮೆ 4 ಪ್ರತಿಶತ ಏರಿಕೆಯಾಗಿದೆ. ಯಾವಾಗ ವಸ್ತುಗಳ ತಯಾರಿಕೆಯಲ್ಲೇ ಇಷ್ಟೊಂದು ಹೆಚ್ಚಳವಾಗುತ್ತದೆ. ಉಳಿದ ಖರ್ಚುಗಳು ಕೂಡ ಹೆಚ್ಚಳವಾಗಿ ಹಣ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅರ್ಥಾತ್ ತಿಂಗಳ ಹಿಂದೆ ಹಣದ ಮುದ್ರಿತ ಮೌಲ್ಯ ಈ ತಿಂಗಳು ಇರುವುದಿಲ್ಲ. 1990 ರಿಂದ ಚೀನಾದ ಮಾಹಿತಿಯನ್ನ ಕೆದಕಿ ನೋಡಿದಾಗ, ಇದು ಕಳೆದ ಮೂರು ದಶಕದಲ್ಲಿ ಅತಿ ಹೆಚ್ಚು ಹಣದುಬ್ಬರವನ್ನ ದಾಖಲು ಮಾಡುತ್ತಿರುವ ಸಮಯವೆಂದು ನಿಶ್ಚಯವಾಗಿ ಹೇಳಬಹುದು. ಇಲ್ಲಿ ಇನ್ನೊಂದು ಬಹಳ ಮುಖ್ಯವಾದ ಅಂಶವನ್ನ ನೀವು ಗಮನಿಸಬೇಕು, ಒಮ್ಮೆ ಚೀನಾದಲ್ಲಿ ಬೆಲೆ ಹೆಚ್ಚಾದರೆ ಅದು ಜಾಗತಿಕ ಮಟ್ಟದಲ್ಲಿ ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೆನಪಿರಲಿ ಜಗತ್ತಿನಲ್ಲಿ ಉತ್ಪತ್ತಿಯಾಗುವ ಪದಾರ್ಥಗಳಲ್ಲಿ ಅರ್ಧಕ್ಕೂ ಹೆಚ್ಚು ಉತ್ಪಾದನೆ ಯಾಗುವುದು ಚೀನಾದಲ್ಲಿ!!

            ಕಳೆದ ವಾರ ಚೀನಾ ಸರಕಾರ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಪದಾರ್ಥಗಳನ್ನ ಸಂಗ್ರಹಿಸಿ ಇಟ್ಟು ಕೊಳ್ಳುವಂತೆ ಹೇಳಿತು. ಹೇಳಿಕೆಯಲ್ಲಿ ಜಸ್ಟ್ ಇನ್ ಕೇಸ್ ಎನ್ನುವುದನ್ನ ಕೂಡ ಹೇಳಿತ್ತು. ಆದರೆ ಜನರಿಗೆ ಅದು ಕೇಳಿಸಲಿಲ್ಲ. ಅಲ್ಲದೆ ಪ್ರಜೆಗಳಿಗೆ ಸರಕಾರ ಹೀಗೆ ಹೇಳುತ್ತಿದೆ ಅಂದರೆ ಮುಕ್ಕಾಲು ಪಾಲು ತೈವಾನ್ ದೇಶದ ಜೊತೆಗೆ ಯುದ್ಧಕ್ಕೆ ಹೋಗಬಹುದು ಎನ್ನುವ ಸಂಶಯ ಶುರುವಾಯಿತು. ಮುಂದಿನದು ಚಲಚಿತ್ರಗಳಲ್ಲಿ ಭೂಮಿ ಅಂತ್ಯವಾಗುತ್ತದೆ ಎಂದಾಗ ಯಾವ ಪ್ಯಾನಿಕ್ ಮಟ್ಟವನ್ನ ತೋರಿಸುತ್ತಾರೆ ಥೇಟ್ ಅದೇ ರೀತಿಯಲ್ಲಿ ಜನ ನಿತ್ಯ ಬಳಕೆಯ ವಸ್ತುಗಳನ್ನ ಖರೀದಿಸಿ ಸಂಗ್ರಹಿಸಲು ಮುಗಿಬಿದ್ದರು. ಇದರಲ್ಲಿ ಯುವಜನತೆ ಕಡಿಮೆ ಇದ್ದರು ಎನ್ನುವುದು ಸಮಾಧಾನ. ಉಳಿದಂತೆ ಹಿರಿಯ ಚೈನಾ ನಾಗರಿಕರು ಇಂದಿಗೂ ಸರಕಾರದ ಪ್ರತಿ ಮಾತನ್ನೂ ಅತ್ಯಂತ ಸೀರಿಯಸ್ಸಾಗಿ ಸ್ವೀಕರಿಸುತ್ತಾರೆ ಎನ್ನುವುದನ್ನ ಮತ್ತೊಮ್ಮೆ ಸಾಬೀತು ಮಾಡಿದರು.

              ಜನ ಹೀಗೆ ಒಮ್ಮೆಲೇ ಬಹಳಷ್ಟು ವಸ್ತುಗಳನ್ನ ಸಂಗ್ರಹಿಸಲು ಮುಗಿ ಬಿದ್ದಾಗ ಏನಾಗಬಹುದು? ಅದೇ ಚೀನಾದಲ್ಲೂ ಆಯ್ತು. ಆನ್ಲೈನ್ ಪೋರ್ಟಲ್ ಗಳು ಕ್ರ್ಯಾಶ್ ಆದವು, ಸ್ವಲ್ಪ ವೇಳೆಯಲ್ಲಿ ಸುಧಾರಿಸಿಕೊಂಡು ಮತ್ತೆ ಚಾಲೂ ಆದಾಗ ಅದೇ ಪದಾರ್ಥಕ್ಕೆ ಹೊಸ ಬೆಲೆಯನ್ನ ಹೊತ್ತು ಬಂದಿದ್ದವು. ಜನರ ಭಯವನ್ನ ಚೆನ್ನಾಗಿ ಎನ್ಕ್ಯಾಷ್ ಮಾಡಿಸಿಕೊಳ್ಳಲಾಯಿತು. ಇನ್ನು ಅಂಗಡಿ ಮುಂಗಟ್ಟುಗಳ ಮುಂದಿನ ಸಾಲು ಸರದಿಯ ಕಥೆ ಬೇರೆಯದು. ಒಟ್ಟಿನಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಚಿತ್ರಣ ಸೃಷ್ಟಿಯಾಗಿತ್ತು. ಇದರ ಜೊತೆಗೆ ಅಲ್ಲಿನ ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಶುರುವಾದವು, ಕೆಲವರು ಮತ್ತೊಂದು ಕೋವಿಡ್ ಮಾದರಿ ಅಟ್ಯಾಕ್ ಅಂದರು, ಕೆಲವರು ತೈವಾನ್ ನೊಂದಿಗೆ ಯುದ್ಧ ಗ್ಯಾರಂಟಿ ಎಂದರು. ಹೀಗೆ ಎಲ್ಲರೂ ಒಂದೊಂದು ರೀತಿಯಲ್ಲಿ ಬರೆದುಕೊಂಡರು. ಅಂತಿಮವಾಗಿ ಸರಕಾರ ಏನಿಲ್ಲ ಇದು ಹೇಳಿಕೇಳಿ ಮಳೆಯ ಕಾಲ, ಹಣ್ಣು ತರಕಾರಿಗಳ ಬೆಲೆ ಹೆಚ್ಚಳ ವಾಗುವ ಸಾಧ್ಯತೆ ಹೆಚ್ಚು ಹೀಗಾಗಿ ಸಂಗ್ರಹಿಸಿ ಎನ್ನುವ ಮಾತನ್ನ ಹೇಳಿದ್ದೆವು ಎಂದಿತು. ಪ್ರತಿ ವರ್ಷವೂ ಮಳೆಗಾಲ ಇದ್ದೆ ಇರುತ್ತದೆ ಆದರೆ ಯಾವ ವರ್ಷವೂ ಈ ರೀತಿ ಹೇಳಿಕೆ ನೀಡದ ಸರಕಾರ ಈ ವರ್ಷ ಹೀಗೇಕೆ ಮಾಡಿತು? ಒಟ್ಟಿನಲ್ಲಿ ಚೀನಾದಲ್ಲಿ ಸಧ್ಯದ ಮಟ್ಟಿಗೆ ಉತ್ತರಾಭಿಮುಖವಾಗಿ ಸಾಗುತ್ತಿರುವ ಹಣದುಬ್ಬರ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.

               ಸದ್ಯದ ಮಟ್ಟಿಗೆ ಚೀನಾ ದೇಶವನ್ನ ಕಟ್ಟಿ ಹಾಕಿರುವುದು , ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದು, ತನ್ಮೂಲಕ ಜಾಗತಿಕ ಹಣದುಬ್ಬರಕ್ಕೆ ಭಾಷ್ಯ ಬರೆದಿರುವ ಕಾರಣಗಳನ್ನ ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದು.

  1. ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿರುವ ತೈಲಬೆಲೆ ಪದಾರ್ಥಗಳ ತಯಾರಿಕಾ ವೆಚ್ಚವನ್ನ ಈ ಮಟ್ಟಿಗೆ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ತೈಲಬೆಲೆ ಕಳೆದ ವರ್ಷಕ್ಕೆ ಹೋಲಿಸದರೆ 30 ಪ್ರತಿಶತ ಹೆಚ್ಚಳವನ್ನ ಕಂಡಿದೆ. ಇದು ನೇರವಾಗಿ ಎಲ್ಲಾ ತಯಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ನಂತರ ಅದನ್ನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವೆಚ್ಚ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಪದಾರ್ಥಗಳ ಬೆಲೆ 50 ರಿಂದ 80 ಪ್ರತಿಶತ ಹೆಚ್ಚಳ ಕಂಡಿದೆ.
  2. ಸಪ್ಲೈ ಚೈನ್ ನಲ್ಲಿ ವ್ಯತ್ಯಯ: ಇಂದಿಗೂ ವಸ್ತುಗಳನ್ನ ಗ್ರಾಹಕರ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕೋವಿಡ್ ಗಿಂತ ಹಿಂದಿನ ಸ್ಥಿತಿಯನ್ನ ತಲುಪಿಲ್ಲ. ಸಹಜವಾಗೇ ಬೆಲೆಗಳು ಹೆಚ್ಚಾಗಿವೆ ಇದರ ಜೊತೆಗೆ ಸರಬರಾಜಿನಲ್ಲಿ ವ್ಯತ್ಯಾಸ ಆಗಿರುವುದರಿಂದ ತಾತ್ಕಾಲಿಕ ಕೊರತೆ ಉಂಟಾಗುತ್ತದೆ. ಬೇಡಿಕೆ ಹೆಚ್ಚಾಗಿ, ಸರಬರಾಜು ಕಡಿಮೆಯಾದಾಗ ಸಹಜವಾಗೇ ಹಣದುಬ್ಬರ ಹೆಚ್ಚಾಗುತ್ತದೆ.

           ಜಗತ್ತಿನಾದ್ಯಂತ ಈ ವರ್ಷ ಅತ್ಯಂತ ಕೆಟ್ಟ ವಾತಾವರಣ ಮನೆ ಮಾಡಿದೆ. ಹೆಚ್ಚು ಮಳೆ, ಹೆಚ್ಚು ಚಳಿ, ಅಕಾಲಿಕ ವಾತಾವರಣ ಹೀಗೆ ಹಲವಾರು ಸಮಸ್ಯೆಗಳನ್ನ ನಾವು ಕಾಣುತ್ತಿದ್ದೇವೆ. ಕೆಲವೊಂದು ವಾತಾವರಣ ಆಧಾರಿತ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಯಕ್ಕೆ ಇದು ಕಾರಣವಾಗಿದೆ.

              ಕಲ್ಲಿದ್ದಲು ಮತ್ತಿತರ ವಸ್ತುಗಳ ಬೆಲೆಯಲ್ಲಿ ಕೂಡ ಹೆಚ್ಚಳವಾಗಿರುವುದು ಪ್ರೊಡಕ್ಷನ್ ಕಾಸ್ಟ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

              ಚೀನಾದ ಹೌಸಿಂಗ್ ಮಾರ್ಕೆಟ್ ಕುಸಿತ ಸರಕಾರದ ಸಮೇತ ಜನರಲ್ಲಿ ಅತಂತ್ರ ಮನೋಭಾವ ಸೃಷ್ಟಿಯಾಗಲು ಕಾರಣವಾಗಿದೆ. ಇಲ್ಲದ ಡಿಮ್ಯಾಂಡ್ ಸೃಷ್ಟಿಸಿದರೆ ಏನಾಗಬಹುದು ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ.

               ದೂರದ ಚೀನಾದಲ್ಲಿ ಏನೂ ಆಗುತ್ತಿದೆ ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತಿಲ್ಲ, ಚೀನಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ಏನಾಗುತ್ತದೆ ಆದರ ಪರಿಣಾಮ ಇಲ್ಲಿ ಭಾರತದಲ್ಲಿ ಕಾಣಲು ಹೆಚ್ಚು ಸಮಯದ ಅವಶ್ಯಕತೆ ಇಲ್ಲ . ಹೆಚ್ಚೆಂದರೆ 15 ದಿನದಿಂದ ತಿಂಗಳು ಸಾಕು. ಇದು ಭಾರತದ ಮೇಲೆ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತದೆ.

             ಅಮೇರಿಕಾ ದೇಶ ಕೂಡ ಹಣದುಬ್ಬರದಿಂದ ಹೊರತಾಗಿಲ್ಲ. ಕಳೆದ ಮೂವತ್ತು ವರ್ಷದಲ್ಲಿ ಕಾಣದ ಹಣದುಬ್ಬರಕ್ಕೆ ಅಮೇರಿಕಾ ಕೂಡ ಸಾಕ್ಷಿಯಾಗುತ್ತಿದೆ. ಕಡಿಮೆ ಆದಾಯ ಹೊಂದಿರುವ ಜನತೆಯ 36 ಪ್ರತಿಶತ ಆದಾಯ ಕೇವಲ ಆಹಾರಕ್ಕೆ ಖರ್ಚಾಗುತ್ತಿದೆ ಎಂದರೆ ಅಲ್ಲಿನ ಆಹಾರ ಪದಾರ್ಥಗಳ ಮೇಲಿನ ಹಣದುಬ್ಬರ ಎಷ್ಟಿರಬಹುದು ಎನ್ನುವ ಅಂದಾಜು ನಿಮ್ಮದಾಗಬಹುದು. ಮೊದಲೇ ಹೆಚ್ಚಾಗಿದ್ದ ಹಣದುಬ್ಬರಕ್ಕೆ ತುಪ್ಪ ಸುರಿಯುವ ಕೆಲಸವನ್ನ ಅಮೇರಿಕಾ ಸರಕಾರ ಮಾಡಿಬಿಟ್ಟಿತು. ಸ್ಟಿಮುಲಸ್ (ಉದ್ದೀಪನ ಪ್ಯಾಕೇಜ್ , ಪ್ರೇರಣಾ ಪ್ಯಾಕೇಜ್ ) ಪ್ಯಾಕೇಜ್ ಘೋಷಣೆ ಮಾಡಿತು. ಟ್ರಿಲಿಯನ್ ಗಟ್ಟಲೆ ಡಾಲರ್ ಮುದ್ರಿಸಿ ಪ್ಯಾಕೇಜ್ ಹೆಸರಿನಲ್ಲಿ ಉದ್ದಿಮೆಗಳಿಗೆ , ಕೆಲಸಗಾರರಿಗೆ ವೇತನ ಕಡಿತ ಮಾಡದೆ ನೀಡಿತು. ಅಂದಿನ ಪರಿಸ್ಥಿತಿಯಲ್ಲಿ ಜನರಿಂದ ಶಹಬಾಸ್ ಗಿರಿ ಪಡೆದುಕೊಂಡಿತು. ಪ್ಯಾಂಡೆಮಿಕ್ ನಂತರದ ಜನರ ಜೀವನ ಬಹಳ ಕಠಿಣ ಮಾಡಿತು. ಉಳ್ಳವರ ಮನೆಯಲ್ಲಿ ಕೂಡ ಆದಾಯದ 8 ಪ್ರತಿಶತ ಕೇವಲ ಆಹಾರ ಪದಾರ್ಥಕ್ಕೆ ಖರ್ಚಾಗುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ.

               ಅಮೇರಿಕಾ ದೇಶದಲ್ಲಿ ಇನ್ನೊಂದು ಅತಿರೇಕ ಕೂಡ ಶುರುವಾಗಿದೆ. ಹೀಗೆ ಟ್ರಿಲಿಯನ್ ಗಟ್ಟಲೆ ಸೃಷ್ಟಿಯಾದ ಹಣ ಒಂದು ವರ್ಗದ ಕೈಯಲ್ಲಿ ಸೇರಿದೆ. ಹೀಗಾಗಿ ಅಮೇರಿಕಾದಲ್ಲಿ ಹೌಸಿಂಗ್ ಮಾರ್ಕೆಟ್ ನಲ್ಲಿ ಇನ್ನಿಲ್ಲದೆ ಬೇಡಿಕೆ ಶುರುವಾಗಿದೆ. ಕೈಯಲ್ಲಿರುವ ಹಣವನ್ನ ಎಲ್ಲಾದರೂ ಹೂಡಿಕೆ ಮಾಡಬೇಕಲ್ಲ! ಹೀಗಾಗಿ ಅಮೇರಿಕಾದಲ್ಲಿ ಮನೆಗಳ ಬೆಲೆ ಮತ್ತೆ ಏರಿಕೆಯತ್ತ ಸಾಗಿದೆ.

                                ಭಾರತದ ಕಥೆಯೇನು?

           ಭಾರತದಲ್ಲಿ ವಾಸಿಸುತ್ತಿರುವ ನಮಗೆ ಇಲ್ಲಿನ ಕಥೆಯ ಸಾರ ಯಾವುದೇ ಪತ್ರಿಕೆಯನ್ನ ಓದದೇ, ಯಾವುದೇ ಹೊಸ ವಿಶ್ಲೇಷಣೆಗಳನ್ನ ಮಾಡದೆ ಅಲ್ಪಸ್ವಲ್ಪ ಖಂಡಿತ ಗೊತ್ತಿರುತ್ತದೆ. ದಿನ ನಿತ್ಯದ ಬದುಕಿನಲ್ಲಿ ನಾವೆಲ್ಲಾ ಇದಕ್ಕೆ ಸಾಕ್ಷಿಯಾಗಿರುತ್ತೇವೆ. ಭಾರತದಲ್ಲಿ ಕೂಡ ಆಹಾರ ಪದಾರ್ಥಗಳ ಮೇಲಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದು ಮಧ್ಯಮ ಮತ್ತು ಬಡ ಮಧ್ಯಮ ವರ್ಗಕ್ಕೆ ಅಪಾರವಾದ ಪೆಟ್ಟು ನೀಡಿದೆ. ಕೇಂದ್ರ ಸರಕಾರ ತೈಲದ ಮೇಲಿನ ತೆರಿಗೆಯನ್ನ ಇಳಿಸಿದ್ದರೂ ಕೂಡ ಪೆಟ್ರೋಲ್ ಬೆಲೆ ನೂರು ರೂಪಾಯಿ ಇದೆ ಎಂದರೆ ಯಾವ ಮಟ್ಟದಲ್ಲಿ ಹಣದುಬ್ಬರವಿದೆ ಎನ್ನುವುದನ್ನ ನೀವೇ ಅರ್ಥ ಮಾಡಿಕೊಳ್ಳಬಹುದು. ಇನ್ನು ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಹಬ್ಬಗಳ ಸಾಲು, ಜೊತೆಗೆ ಮಳೆ ಮತ್ತು ಚಳಿ ಕೂಡ ಜೊತೆಯಾಗಿ ಹಣ್ಣು ಮತ್ತು ತರಕಾರಿಗಳ ಬೆಲೆಯನ್ನ ಗಗನಕ್ಕೇರಿಸಿವೆ. ಇವೆಲ್ಲ ತಾತ್ಕಾಲಿಕ ಕಾರಣಗಳು, ಪೆಟ್ರೋಲ್ ಬೆಲೆ ಜಾಗತಿಕ ಮಟ್ಟದಲ್ಲಿ ಕಡಿಮೆಯಾದಗ ಇವುಗಳು ಕೂಡ ಕಡಿಮೆಯಾಗುತ್ತದೆ ಎನ್ನುವ ಮಾತು ಪೂರ್ಣ ಸತ್ಯವಲ್ಲ ಎನ್ನುವುದನ್ನ ಅನುಭವದಿಂದ ಕಲಿತ್ತಿದ್ದೇವೆ ಅಲ್ಲವೇ?

              ಮುಗಿಸುವ ಮುನ್ನ: ಹಣದುಬ್ಬರ ಎನ್ನುವುದು ಇಂದು ಜಾಗತಿಕ ಸಮಸ್ಯೆ. ಈ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳಬೇಕು. ಬೆಲೆ ಹೆಚ್ಚಾಯ್ತು ಎಂದು ವೇತನ ಹೆಚ್ಚಳ, ವೇತನ ಹೆಚ್ಚಾಯ್ತು ಎಂದು ಬೆಲೆ ಏರಿಕೆ, ಈ ರೀತಿಯ ಆಟದಲ್ಲಿ ಜಗತ್ತಿನ ಒಂದು ವರ್ಗ ಒಪ್ಪತ್ತಿನ ಊಟವನ್ನ ಕೂಡ ಕೊಳ್ಳಲಾಗದ ಸ್ಥಿತಿಗೆ ಬಂದು ಬಿಡುತ್ತದೆ. ಸಾಂಘಿಕ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಆದರೆ ಜಗತ್ತು ಇಂದು ಒಡೆದ ಮನೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು? ಎನ್ನುವುದು ಪ್ರಶ್ನೆ. ಇವೆಲ್ಲವುಗಳ ನಡುವೆ ಸೊರಗುವುದು ಮಾತ್ರ ಜನ ಸಾಮಾನ್ಯ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries