ನವದೆಹಲಿ:ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ(ಎನ್‌ಸಿಎಂ)ವು ಹಾಲಿ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಹಿಂದಿನ ಇಡೀ ಹಣಕಾಸು ವರ್ಷಕ್ಕಿಂತ ಹೆಚ್ಚಿನ ದೂರುಗಳನ್ನು ಸಿಖ್,ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಂದ ಸ್ವೀಕರಿಸಿದೆ ಎನ್ನುವುದನ್ನು ಸಂಸತ್ತಿಗೆ ಸಲ್ಲಿಸಲಾಗಿರುವ ಅಂಕಿಅಂಶಗಳು ತೋರಿಸಿವೆ.
ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರ ಪ್ರಶ್ನೆಗೆ ಉತ್ತರವಾಗಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ರಾಜ್ಯಸಭೆಯಲ್ಲಿ ಒದಗಿಸಿರುವ ದತ್ತಾಂಶಗಳಂತೆ,ಹಾಲಿ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಸಿಖ್,ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಂದ ಗರಿಷ್ಠ ಸಂಖ್ಯೆಯ ದೂರುಗಳು ಎನ್‌ಸಿಎಂ ಬಳಿ ದಾಖಲಾಗಿವೆ. ಸಿಕ್ಖರಿಂದ 115 (ಕಳೆದ ವರ್ಷ 99),ಬೌದ್ಧರಿಂದ 35 (ಕಳೆದ ವರ್ಷ 28) ಮತ್ತು ಪಾರ್ಸಿಗಳಿಂದ ಐದು (ಕಳೆದ ವರ್ಷ ಎರಡು) ದೂರುಗಳನ್ನು ಎನ್‌ಸಿಎಂ ಸ್ವೀಕರಿಸಿದೆ.
ಮುಸ್ಲಿಮರು ಮತ್ತು ಕ್ರೈಸ್ತರಿಂದ ಹಿಂದಿನ ಇಡೀ ವರ್ಷದಲ್ಲಿ ಅನುಕ್ರಮವಾಗಿ 1,103 ಮತ್ತು 103 ದೂರುಗಳು ದಾಖಲಾಗಿದ್ದರೆ ಪ್ರಸಕ್ತ ವರ್ಷದ ಮೊದಲ ಎಂಟು ತಿಂಗಳುಗಳಲ್ಲಿ 864 ಮತ್ತು 88 ದೂರುಗಳು ಬಂದಿವೆ.
ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ನೀಡಿರುವ ಉತ್ತರದಂತೆ ದೂರುಗಳ ಒಟ್ಟು ಸಂಖ್ಯೆ ಹಿಂದಿನ ವರ್ಷಗಳಲ್ಲಿ ಇಳಿಮುಖ ಪ್ರವೃತ್ತಿಯನ್ನು ತೋರಿಸಿದೆ. 2018-19ರಲ್ಲಿ 1,871 ದೂರುಗಳು ದಾಖಲಾಗಿದ್ದರೆ,ಈ ಸಂಖ್ಯೆ 2019-20ರಲ್ಲಿ 1620ಕ್ಕೆ ಮತ್ತು 2020-21ರಲ್ಲಿ 1,463ಕ್ಕೆ ಇಳಿದಿತ್ತು.
ಆದರೆ ಈ ವರ್ಷದ ನ.22ರವರೆಗೆ ಎನ್‌ಸಿಎಂ ಬಳಿ ದಾಖಲಾಗಿರುವ ದೂರುಗಳ ಸಂಖ್ಯೆ ಈಗಾಗಲೇ 1,234ಕ್ಕೆ ತಲುಪಿದೆ. ಹಣಕಾಸು ವರ್ಷ ಪೂರ್ಣಗೊಳ್ಳಲು ನಾಲ್ಕು ತಿಂಗಳುಗಳು ಬಾಕಿಯಿದ್ದು,ಹಾಲಿ ದರವೇ ಮುಂದುವರಿದರೆ ದೂರುಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಬಹುದು.
2020-21ರಲ್ಲಿ ಕೋಮು ಹಿಂಸಾಚಾರದ ಐದು ದೂರುಗಳು ದಾಖಲಾಗಿದ್ದು,ಹಿಂದಿನೆರಡು ವರ್ಷಗಳಲ್ಲಿ ಇಂತಹ ಯಾವುದೇ ದೂರು ದಾಖಲಾಗಿರಲಿಲ್ಲ.ಇದೇ ರೀತಿ 2020-21ರಲ್ಲಿ ಭೂವಿವಾದದ 119 ದೂರುಗಳು ದಾಖಲಾಗಿದ್ದು,ಹಿಂದಿನೆರಡು ವರ್ಷಗಳಲ್ಲಿ ಇಂತಹ ಯಾವುದೇ ದೂರು ದಾಖಲಾಗಿರಲಿಲ್ಲ. ಅಂಕಿಅಂಶಗಳು ಸೂಚಿಸಿರುವಂತೆ ಮೂರು ವರ್ಷಗಳಲ್ಲಿ ದ್ವೇಷಾಪರಾಧದ ಯಾವುದೇ ದೂರು ದಾಖಲಾಗಿರಲಿಲ್ಲ.
ಈ ಎಲ್ಲ ಮೂರು ವರ್ಷಗಳಲ್ಲಿ ಗರಿಷ್ಠ ದೂರುಗಳು 'ಕಾನೂನು ಮತ್ತು ಸುವ್ಯವಸ್ಥೆ ' ಹಾಗೂ 'ಇತರ ವಾಡಿಕೆಯ ದೂರುಗಳು' ವರ್ಗಗಳಿಗೆ ಸೇರಿವೆ. ಪ್ರಸಕ್ತ ಹಣಕಾಸು ವರ್ಷಕ್ಕೆ ದೂರುಗಳ ಸ್ವರೂಪಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಚಿವಾಲಯವು ಒದಗಿಸಿಲ್ಲ.
ಎನ್‌ಸಿಎಂ ದೂರನ್ನು ಸ್ವೀಕರಿಸಿದಾಗ ತನ್ನ ನಿಯಮಗಳು, ನಿಬಂಧನೆಗಳು ಮತ್ತು ಕಾರ್ಯವಿಧಾನಗಳ ಅನ್ವಯ ಸಂಬಂಧಿತ ಅಧಿಕಾರಿಗಳಿಂದ ವರದಿಯನ್ನು ಕೋರುತ್ತದೆ ಮತ್ತು ಅಗತ್ಯವಾದರೆ ಅವರನ್ನು ಕರೆಸುತ್ತದೆ ಮತ್ತು ನಂತರ ಸೂಕ್ತ ಶಿಫಾರಸುಗಳನ್ನು ಮಾಡುತ್ತದೆ ಅಥವಾ ಅಗತ್ಯ ಕ್ರಮಕ್ಕಾಗಿ ಸೂಕ್ತ ಪ್ರಾಧಿಕಾರಕ್ಕೆ ದೂರುಗಳನ್ನು ರವಾನಿಸುತ್ತದೆ ಎಂದು ಉತ್ತರದಲ್ಲಿ ತಿಳಿಸಿರುವ ನಕ್ವಿ,ಪ್ರಚಾರಕ್ಕಾಗಿ,ಸುಳ್ಳು,ಕ್ಷುಲ್ಲಕ ಮತ್ತು ಅನಾಮಧೇಯ ಎಂದು ತೀರ್ಮಾನಿಸಲಾದ ದೂರುಗಳನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಮುಚ್ಚಲಾಗುತ್ತದೆ. ಸುಳ್ಳುಗಳು ನಿಜವೇ ಅಥವಾ ಸುಳ್ಳೇ ಎನ್ನುವುದನ್ನು ತಿಳಿದುಕೊಳ್ಳಲು ಎನ್‌ಸಿಎಂ ಕಳೆದ ಮೂರು ವರ್ಷಗಳಲ್ಲಿ 115 ವಿಚಾರಣೆಗಳನ್ನು ನಡೆಸಿದೆ ಎಂದು ಹೇಳಿದ್ದಾರೆ.