ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ತಯಾರಿ ನಡೆಸುತ್ತಿದ್ದು, ಅದರ ಉನ್ನತ ಅಧಿಕಾರಿಗಳು ಸೋಮವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಆಯೋಗವು ಕೋವಿಡ್-19 ಪರಿಸ್ಥಿತಿ ಮತ್ತು ಹೊಸ ಕೊರೋನಾವೈರಸ್ ರೂಪಾಂತರಿ ಓಮಿಕ್ರಾನ್‌ನ ಹರಡುವಿಕೆ ಕುರಿತು ಭೂಷಣ್ ಅವರಿಂದ ಮಾಹಿತಿ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆಗಳ ಅವಧಿ ಮುಂದಿನ ವರ್ಷ ಮಾರ್ಚ್‌ನಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಕೊನೆಗೊಳ್ಳಲಿದೆ. ಉತ್ತರ ಪ್ರದೇಶದ ವಿಧಾನಸಭೆಯ ಅವಧಿ ಮೇನಲ್ಲಿ ಅಂತ್ಯಗೊಳ್ಳಲಿದೆ. ಚುನಾವಣಾ ಆಯೋಗವು ಮುಂದಿನ ತಿಂಗಳು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಚುನಾವಣಾ ಪ್ರಚಾರ, ಮತದಾನದ ದಿನಗಳು ಮತ್ತು ಎಣಿಕೆಯ ದಿನಾಂಕಗಳಿಗಾಗಿ ತನ್ನ ಕೋವಿಡ್ ಶಿಷ್ಟಾಚಾರವನ್ನು ಸುಧಾರಣೆ ಮಾಡಿಕೊಳ್ಳಲು ಆಯೋಗ ಭೂಷಣ್ ಅವರಿಂದ ಸಲಹೆಗಳನ್ನು ಪಡೆಯಬಹುದು. ಮಂಗಳವಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಸಹ ಚುನಾವಣಾ ಆಯುಕ್ತರು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ.
ಗುರುವಾರ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಅಲಹಾಬಾದ್ ಹೈಕೋರ್ಟ್ ಪೀಠ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡಲು ಮತ್ತು ಕೋವಿಡ್ -19 ರ ಮೂರನೇ ತರಂಗದ ಭಯದ ನಡುವೆ ಎಲ್ಲಾ ರಾಜಕೀಯ ರ್ಯಾಲಿಗಳನ್ನು ನಿಷೇಧಿಸಲು ಸರ್ಕಾರ ಮತ್ತು ಚುನಾವಣಾ ಸಮಿತಿಯನ್ನು ಒತ್ತಾಯಿಸಿದೆ.
ಉತ್ತರ ಪ್ರದೇಶಕ್ಕೆ ಮುಂದಿನ ವಾರ ಭೇಟಿ ನೀಡಲಿದ್ದು, ಪರಿಸ್ಥಿತಿ ಪರಾಮರ್ಶೆ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಇಸಿ ಸುಶೀಲ್ ಚಂದ್ರ ಡೆಹ್ರಡೂನ್ ನಲ್ಲಿ ಶುಕ್ರವಾರ ತಿಳಿಸಿದ್ದರು. ಆಯೋಗ ಈಗಾಗಲೇ ಪಂಜಾಬ್, ಗೋವಾ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.