ಲಖನೌ: ಉತ್ತರ ಪ್ರದೇಶದ ಮಾಜಿ ಗೃಹ ಸಚಿವ ರಾಜೇಂದ್ರ ತ್ರಿಪಾಠಿ ಸೇರಿದಂತೆ ಹಲವು ನಾಯಕರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಮಾಧ್ಯಮ ವಿಭಾಗದ ಸಹ ಮುಖ್ಯಸ್ಥ ಹಿಮಾಂಶು ದುಬೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಿವೃತ್ತ ಐಪಿಎಸ್ ಅಧಿಕಾರಿ ಗುರ್ಬಚಾನ್ ಲಾಲ್ ಸೇರಿದಂತೆ, ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಕೃಷ್ಣಪಾಲ್ ಸಿಂಗ್ ರಜಪೂತ್ (ಝಾನ್ಸಿ), ವೀರ್ ಸಿಂಗ್ ಪ್ರಜಾಪತಿ (ಬುಲಂದ್‌ಷಹರ್), ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮುನಿ ದೇವ್ ಶರ್ಮಾ (ಬಿಜನೂರ್), ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸ್ಥಾಪಕ ಸದಸ್ಯ ಕುನ್ವಾರ್ ಬಲ್‌ಬಿರ್ ಸಿಂಗ್ ಚೌಹಾಣ್ ಅವರೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯ ಸಿದ್ಧಾಂತ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಸೇರುತ್ತಿರುವುದಾಗಿ ನಾಯಕರು ತಿಳಿಸಿರುವುದಾಗಿ ದುಬೆ ಹೇಳಿದ್ದಾರೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.