ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಎಂಬುದು ಸವಾಲಿನ ಕೆಲಸ, ಅದರಲ್ಲೂ ನಗರ ಪ್ರದೇಶಗಳಲ್ಲಿ ಉಂಟಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕಷ್ಟ ಹೇಳತೀರದು. ಇದರಿಂದ ಎಲ್ಲಿ ನೋಡಿದರೂ, ಕಸದ ರಾಶಿಯೇ ಕಾಣಿಸಿಗುತ್ತದೆ. ಆದ್ದರಿಂದ ತ್ಯಾಜ್ಯಗಳು ಅಥವಾ ಕಸಗಳು ಹೆಚ್ಚು ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
ತ್ಯಾಜ್ಯ ಮೊದಲು ಸೃಷ್ಟಿಯಾಗುವುದೇ ನಮ್ಮ ಮನೆಗಳಲ್ಲಿ, ಅದರಲ್ಲೂ ಅಡುಗೆ ಮನೆಗಳಲ್ಲಿ. ಉಳಿದ ಆಹಾರ, ಉತ್ಪನ್ನಗಳನ್ನು ಖರೀದಿಸಿದ ವಿವಿಧ ಪ್ಯಾಕೆಟ್, ಪ್ಲಾಸ್ಟಿಕ್ ವಸ್ತುಗಳಿಂದ ಸಾಕಷ್ಟು ಕಸ ಉಂಟಾಗುತ್ತವೆ. ಇಲ್ಲಿ ನೀವು ಕಡಿಮೆ ತ್ಯಾಜ್ಯ ಅಥವಾ ಝಿರೋ ವೇಸ್ಟೇಜ್ ಆಗುವಂತೆ ನೋಡಿಕೊಂಡರೆ, ಸ್ವಲ್ಪ ಪ್ರಮಾಣದಲ್ಲಿ ಕಸ ಉಂಟಾಗುವುದನ್ನು ತಡೆಯಬಹುದು. ಹಾಗಾದರೆ, ಅಡುಗೆ ಮನೆಯಲ್ಲಿ ತ್ಯಾಜ್ಯ ಕಡಿಮೆಮಾಡಲು ಏನು ಮಾಡಬೇಕು ಎಂಬುದನ್ನು ನಾವಿಂದು ನೋಡೋಣ.
ಅಡುಗೆಮನೆಯಲ್ಲಿ ತ್ಯಾಜ್ಯ ಕಡಿಮೆ ಮಾಡಲು ಅಳವಡಿಸಿಕೊಳ್ಳಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:
ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ: ಸಾಧ್ಯವಾದಾಗಲೆಲ್ಲಾ, ಸ್ಥಳೀಯ ರೈತರ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಆರಿಸಿಕೊಳ್ಳಿ. ಇದು ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಆಶ್ಚರ್ಯ ಪಡ್ತಾ ಇದೀರಾ ಅಲ್ವಾ? ಹೌದು, ನೀವು ಸ್ಥಳೀಯ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಖರೀದಿಸುವಾಗ ಅವರು ಆ ಉತ್ಪನ್ನಗಳನ್ನು ಸುತ್ತಿ ಅಥವಾ ಪ್ಯಾಕ್ ಮಾಡಿ ಕೊಡದೇ ನೇರವಾಗಿ, ನಿಮ್ಮ ಸ್ವಂತ ಚೀಲಕ್ಕೆ ಹಾಕುತ್ತಾರೆ. ಅಲ್ಲದೆ, ಅಂತಹ ಮಾರುಕಟ್ಟೆಗಳಲ್ಲಿ ತಾಜಾ ಉತ್ಪನ್ನಗಳು ಅಗ್ಗವಾಗಿ ಲಭ್ಯವಾಗುತ್ತವೆ.
ಮರುಬಳಕೆಯ ಬ್ಯಾಗ್ ಬಳಸಿ: ಈಗ ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ. ಆದ್ದರಿಂದ ನೀವು ದಿನಸಿ ಶಾಪಿಂಗ್‌ಗಾಗಿ ಹೊರಗೆ ಹೋಗುವಾಗ, ಮರುಬಳಕೆ ಮಾಡಬಹುದಾದ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ, ಅಲ್ಲದೆ, ನಿಮ್ಮ ಅಡುಗೆಮನೆಯಲ್ಲಿ ಆಹಾರ ಸಂಗ್ರಹಣೆಗೆ ಬಂದಾಗ ಮರುಬಳಕೆ ಮಾಡಬಹುದಾದ ಜಾರ್ ಮತ್ತು ಪೆಟ್ಟಿಗೆಗಳನ್ನು ಇಡಬಹುದು.
ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡಿ: ನೀವು ದಿನಸಿ ಖರೀದಿಸಲು ಹೋಗುವಾಗ ಪಟ್ಟಿ ಮಾಡಿಕೊಳ್ಳಿ, ಅಗತ್ಯ ಅನುಗುಣವಾಗಿ ವಸ್ತುಗಳನ್ನು ಖರೀದಿಸಿ. ಇದರಿಂದ , ಆಗಾಗ ಶಾಪಿಂಗ್ ಮಾಡುವುದು, ಅದರಿಂದ ಉಂಟಾಗುವ ಕಸಗಳು ಕಡಿಮೆಯಾಗುವುದು.
ಗಿಡಮೂಲಿಕೆಗಳನ್ನು ಮನೆಯಲ್ಲಿ ಬೆಳೆಸಿ: ಪುದೀನ, ಕೊತ್ತಂಬರಿ ಮುಂತಾದ ಸಾವಯವ ಮತ್ತು ಪ್ಯಾಕೇಜ್-ಮುಕ್ತ ಗಿಡಮೂಲಿಕೆಗಳನ್ನು ಖರೀದಿಸುವುದು ತುಂಬಾ ಕಷ್ಟ. ನಿಮ್ಮ ಅಡುಗೆಮನೆಯಲ್ಲಿ ತ್ಯಾಜ್ಯ ಕಡಿಮೆಮಾಡಲು ಈ ಗಿಡಮೂಲಿಕೆಗಳನ್ನು ನೀವೇ ಸಣ್ಣ ಮಡಕೆಗಳಲ್ಲಿ ಬೆಳೆಸಬಹುದು. ಹೆಚ್ಚುವರಿ ಸ್ಥಳಾವಕಾಶವನ್ನು ತಡೆಗಟ್ಟಲು ಅವುಗಳನ್ನು ಕೌಂಟರ್ಟಾಪ್ನಲ್ಲಿ ಇರಿಸಬಹುದು. ಇದು ನಿಮ್ಮ ಅಡುಗೆಮನೆಗೆ ಉತ್ತಮ ನೋಟವನ್ನು ನೀಡುತ್ತದೆ.
ಉಳಿದ ಆಹಾರವನ್ನು ಬಳಸಿ: ಅಡುಗೆಮನೆಗೆ ಯಾವುದಾದರೂ, ಆಹಾರ ತಯಾರಿಸಲು ಬಂದಾಗ, ಉಳಿದಿರುವ ಆಹಾರವನ್ನು ಬಳಸಲು ಮರೆಯದಿರಿ. ಹೊಸ ಖಾದ್ಯವನ್ನು ಮಾಡಲು ಅವುಗಳನ್ನು ಎಸೆಯದೇ, ಬಳಸಿ. ಅಡುಗೆಮನೆಯನ್ನು ತ್ಯಾಜ್ಯಮುಕ್ತ ಮಾಡಲು ಅಳವಡಿಸಿಕೊಳ್ಳಬಹುದಾದ ಪ್ರಮುಖ ವಿಧಾನಗಳಲ್ಲಿ ಇದು ಒಂದಾಗಿದೆ.
ತಿನ್ನಲು ಸಣ್ಣತಟ್ಟೆ ಬಳಸಿ: ಮುಂದಿನ ಬಾರಿ ಆಹಾರ ಸೇವಿಸಲು ಕುಳಿತಾಗ, ಸಣ್ಣ ತಟ್ಟೆಯಲ್ಲಿ ಬಡಿಸಿಕೊಳ್ಳಿ. ಇದರಿಂದ ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು. ನಿಮಗೇನಾದರೂ ಬೇಕೆನೆಸಿದರೆ, ಮತ್ತೊಮ್ಮೆ ಬಡಿಸಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬಹುದು.
ಜಾರ್‌ಗಳನ್ನು ಮರುಬಳಕೆ ಮಾಡಿ: ನಿಮ್ಮ ಹಳೆಯ ಜಾರ್‌ಗಳನ್ನು ಆದಷ್ಟು ಮರುಬಳಕೆ ಮಾಡಿ. ಮನೆಯಲ್ಲಿ ಹಳೆಯ ಜಾರ್ ಬಿದ್ದಿದ್ದರೆ, ಅದನ್ನು ತೆಗೆದು ಚೆನ್ನಾಗಿ ತೊಳೆದು, ಒಣಗಿಸಿ. ಪ್ಯಾಕೆಟ್ ಇರುವ ಯಾವುದೇ ಆಹಾರವನ್ನು ಸಂಗ್ರಹಿಸಲು ಅದನ್ನು ಮರುಬಳಕೆ ಮಾಡಬಹುದು. ಅಷ್ಟೇ ಅಲ್ಲ, ತೋಟದಲ್ಲಿ ಗಿಡ ನೆಡಲು ಸಹ ಬಳಸಬಹುದು.