ಕೊಚ್ಚಿ: ಹೆಚ್ಚುತ್ತಿರುವ ಬಿಜೆಪಿಯ ಜನಪ್ರಿಯತೆಯನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕು ಎಂದು ಕೇರಳ ಸರ್ಕಾರ ಯತ್ನಿಸುತ್ತಿದೆ. ರಾಜಕೀಯ ನಾಯಕರ ಹತ್ಯೆಯ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಆರೋಪಿಸಿದ್ದಾರೆ.
ಆಲಪ್ಪುಳದಲ್ಲಿ ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಭಾನುವಾರ ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಎಸ್‍ಡಿಪಿಐ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೆÇಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ರಾಜಕೀಯ ಸಂಘರ್ಷ: 12 ಗಂಟೆಗಳಲ್ಲಿ ಎಸ್‍ಡಿಪಿಐ, ಬಿಜೆಪಿ ನಾಯಕರ ಹತ್ಯೆ
ರಂಜಿತ್ ಶ್ರೀನಿವಾಸನ್ ಅವರಿಗೆ ಅಂತಿಮ ಗೌರವ ಸಲ್ಲಿಸುವುದಕ್ಕಾಗಿ ನಿತ್ಯಾನಂದ ರೈ ಕೇರಳಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇರಳದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ದೂರಿದ್ದಾರೆ.
'ಹೇಗಾದರೂ ಮಾಡಿ ಬಿಜೆಪಿಯ ಜನಪ್ರಿಯತೆಯನ್ನು ಹತ್ತಿಕ್ಕಬೇಕು ಮತ್ತು ಪಕ್ಷಕ್ಕೆ ಸಾರ್ವಜನಿಕ ಬೆಂಬಲ ದೊರೆಯುವುದನ್ನು ತಡೆಯಬೇಕು ಎಂದು ಸರ್ಕಾರ ಬಯಸುತ್ತಿದೆ. ಇದಕ್ಕಾಗಿ ಹತ್ಯೆಯಲ್ಲಿ ಶಾಮೀಲಾದವರನ್ನು ರಕ್ಷಿಸುತ್ತಿದೆ' ಅವರು ಆರೋಪಿಸಿದ್ದಾರೆ.
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಕೇವಲ 12 ತಾಸಿನ ಅವಧಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಬಿಜೆಪಿಯ ತಲಾ ಒಬ್ಬ ನಾಯಕ ಹತ್ಯೆಗೀಡಾಗಿದ್ದಾರೆ.