ನವದೆಹಲಿ: ನಾಗರಿಕ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಹಾಗೂ ಇನ್ನೂ ಕೆಲವರ ವಿರುದ್ಧ ಮ್ಯಾನ್ಮಾರ್ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಆಘಾತವಾಗಿ ಎಂದು ಭಾರತ ತಿಳಿಸಿದೆ.
ಕೋವಿಡ್ ನಿಯಮ ಉಲ್ಲಂಘನೆ ಮತ್ತು ಶಾಂತಿ ಭಂಗ ಉಂಟುಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಸೂಕಿ ಅವರಿಗೆ ನಾಲ್ಕು ವರ್ಷ ಶಿಕ್ಷೆ ಪ್ರಕಟಿಸಲಾಗಿತ್ತು.ಬಳಿಕ ಶಿಕ್ಷೆಯ ಪ್ರಮಾಣವನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ.
ಮ್ಯಾನ್ಮಾರ್‌ನಲ್ಲಿ ಸೂಕಿ ಮತ್ತು ಇತರರ ವಿರುದ್ಧ ನೀಡಲಾಗಿರುವ ತೀರ್ಪುಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.
'ಇತ್ತೀಚಿನ ತೀರ್ಪುಗಳಿಂದ ನಾವು ಆಘಾತಗೊಂಡಿದ್ದೇವೆ. ನೆರೆಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ನಿರಂತರವಾಗಿ ಬೆಂಬಲಿಸುತ್ತಿದೆ' ಎಂದು ಅವರು ಹೇಳಿದ್ದಾರೆ.
'ಕಾನೂನು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಎತ್ತಿ ಹಿಡಿಯಬೇಕು ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಆ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಯಾವುದೇ ಘಟನೆಗಳು ನಡೆಯುವುದು ಕಳವಳದ ಸಂಗತಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆ ದೇಶದ ಭವಿಷ್ಯವನ್ನು ಗಮನದಲ್ಲಿರಿಸಿ, ಮಾತುಕತೆ ನಡೆಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡಲಾಗುವುದು' ಎಂದೂ ಹೇಳಿದ್ದಾರೆ.
ಮ್ಯಾನ್ಮಾರ್ ಆಡಳಿತವನ್ನು ಅಲ್ಲಿನ ಸೇನೆಯು ಫೆಬ್ರವರಿಯಲ್ಲಿ ಹಿಡಿತಕ್ಕೆ ಪಡೆದಿತ್ತು. ಅದಾದ ಬಳಿಕ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಮೃತಪಟ್ಟಿದ್ದರು.
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ನಾಯಕಿ ಸೂಕಿ ಸೇರಿದಂತೆ ಹಲವು ಪ್ರಮುಖ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು.