ನವದೆಹಲಿ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಒಮಿಕ್ರಾನ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಕರ್ನಾಟಕದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿವೆ.
66 ಮತ್ತು 46 ವರ್ಷದ ವ್ಯಕ್ತಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಅಲ್ಲದೇ ಇವರಿಬ್ಬರೂ ಬೆಂಗಳೂರಿನವರೇ ಎಂದು ಹೇಳಲಾಗುತ್ತಿದೆ. ಇದರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಮತ್ತೋರ್ವ ವ್ಯಕ್ತಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಶಂಕೆ ಇದೆ.
ಸುಮಾರು 29 ದೇಶಗಳಲ್ಲಿ ಇಲ್ಲಿಯವರೆಗೆ ಒಮಿಕ್ರಾನ್ ರೂಪಾಂತರದ 373 ಪ್ರಕರಣಗಳು ವರದಿಯಾಗಿವೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ಇತರ 11 ದೇಶಗಳನ್ನು ಒಳಗೊಂಡಿರುವ ಆಗ್ನೇಯ ಏಷ್ಯಾದ ದೇಶಗಳು ಕಳೆದ ಒಂದು ವಾರದಲ್ಲಿ ಕೇವಲ 1.2 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ. ವಿಶ್ವದ ಪ್ರಕರಣಗಳಲ್ಲಿ ಕೇವಲ ಶೇ. 3.1ರಷ್ಟು ಮಾತ್ರ ಈ ದೇಶಗಳಲ್ಲಿ ಪತ್ತೆಯಾಗಿವೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ ಎಂದರು.
ಒಟ್ಟಾರೆ ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಯುರೋಪ್ ವಿಶ್ವದ ಶೇ.70ರಷ್ಟು ಪ್ರಕರಣಗಳನ್ನು ವರದಿ ಮಾಡಿದೆ. ನವೆಂಬರ್ 28ಕ್ಕೆ ಕೊನೆಗೊಂಡ ವಾರದಲ್ಲಿ, ಯುರೋಪಿಯನ್ ದೇಶದಲ್ಲಿ ಸುಮಾರು 2.75 ಲಕ್ಷ ಹೊಸ ಪ್ರಕರಣಗಳು ಮತ್ತು 31,000ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ಲವ್ ಅಗರ್ವಾಲ್ ಹೇಳಿದರು.
ಭಾರತದಲ್ಲಿ ಕೊರೋನಾ: ಕೋವಿಡ್ ಪ್ರಕರಣಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಪ್ರಮಾಣ ಶೇಕಡ 55ರಷ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ, ಕಳೆದ ವಾರ ಕೇರಳದಲ್ಲಿ ಶೇಕಡ 54ರಷ್ಟು ಪ್ರಕರಣಗಳು ವರದಿಯಾಗಿದ್ದವು. ದೇಶದ 18 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇಕಡ 5ರಿಂದ 10ರ ನಡುವೆ ವರದಿಯಾಗುತ್ತಿದ್ದು, 15 ಜಿಲ್ಲೆಗಳಲ್ಲಿ ಶೇಕಡ 10ರಷ್ಟು ವರದಿಯಾಗುತ್ತಿದೆ ಎಂದು ಅಂಕಿ ಅಂಶ ನೀಡಿದರು.
ದೇಶದಲ್ಲಿ ಈವರೆಗೆ 79.16 ಕೋಟಿ ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 45.92 ಕೋಟಿ ಮಂದಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ. ಒಟ್ಟಾರೆ 125 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಇದರಿಂದ ಶೇಕಡ 84.3ರಷ್ಟು ವಯಸ್ಕರಿಗೆ ಒಂದು ಡೋಸ್, ಶೇಕಡ 49ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ.