ಆಲಪ್ಪುಳ: ಆಲಪ್ಪುಳದಲ್ಲಿ ಬಿಜೆಪಿ ಹಾಗೂ ಎಸ್‍ಡಿಪಿಐ ಮುಖಂಡರಿಬ್ಬರ ಕೊಲೆಪ್ರಕರಣ ರಾಜ್ಯವನ್ನು ತಲ್ಲಣಗೊಳಿಸಿದ್ದು, ಎರಡೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಎಸ್‍ಡಿಪಿಐ ಮುಖಂಡ ಕೆ.ಎಸ್ ಶಾನ್ ಹಾಗೂ ಬಿಜೆಪಿ ಮುಖಂಡ ರಂಜಿತ್‍ಶ್ರೀನಿವಾಸ್ ಕೊಲೆಯಾದವರು. ಎರಡೂ ಕೊಲೆ ಪ್ರಕರಣದ ಹಿಂದೆ ಭಾರಿ ಸಂಚು ಅಡಕವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್‍ಡಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ. ಆಲಪ್ಪುಳ ಮಣ್ಣಂಚೇರಿ ನಿವಾಸಿ ಕೆ.ಎಸ್.ಶಾನ್(38)ಎಂಬವರನ್ನು ಕಾರಿನಲ್ಲಿ ಆಗಮಿಸಿದ ನಾಲ್ಕು ಮಂದಿಯ ತಂಡ ಶನಿವಾರ ಸಂಜೆ ಕಡಿದು ಗಂಭೀರ ಗಾಯಗೊಳಿಸಿದ್ದು, ಮಧ್ಯರಾತ್ರಿ ವೇಳೆಗೆ ಆಲಪ್ಪುಳದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂಘ ಪರಿವಾರ ಕಾರ್ಯಕರ್ತರು ಕೊಲೆ ನಡೆಸಿರುವುದಾಗಿ ಎಸ್‍ಡಿಪಿಐ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಣ್ಣಂಚೇರಿ ನಿವಾಸಿಗಳಾದ ಪ್ರಸಾದ್ ಹಾಗೂ ಕೊಚ್ಚುಕುಟ್ಟನ್ ಬಂಧಿತರು.
ಇದಾದ 12 ತಾಸುಗಳೊಳಗೆ ಬಿಜೆಪಿ ಮುಖಂಡ, ಓಬಿಸಿ ಘಟಕ ಮುಖ್ಯಸ್ಥ ರಂಜಿತ್‍ಶ್ರೀನಿವಾಸ್ ಅವನ್ನು ತಂಡವೊಂದು ಮನೆಗೆ ನುಗ್ಗಿ ಬರ್ಬರವಾಗಿ ಕೊಲೆ ನಡೆಸಿದೆ. ಭಾನುವಾರ ಬೆಳಗ್ಗೆ ವಾಯುವಿಹಾರಕ್ಕೆ ಮನೆಯೊಳಗೆ ಸಜ್ಜುಗೊಳ್ಳುತ್ತಿದ್ದ ಸಂದರ್ಭ ತಂಡ ಮನೆಯೊಳಗೆ ಅತಿಕ್ರಮಿಸಿ ನುಗ್ಗಿ ಕೃತ್ಯವೆಸಗಿದೆ. ಬೈಕುಗಳಲ್ಲಿ ಆಗಮಿಸಿದ 12ಮಂದಿಯ ತಂಡ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಬೈಕ್‍ಗಳಲ್ಲಿ ಸಂಚರಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 11ಮಂದಿ ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಸ್‍ಡಿಪಿಐ ಸಂಘಟನೆಗೆ ಸೇರಿದ ಆಂಬುಲೆನ್ಸ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.
2021 ಫೆಬ್ರವರಿಯಲ್ಲಿ ಆಲಪ್ಪುಳ ವಯಲಾರ್‍ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಂದು ಎಂಬವರನ್ನು ಎಸ್‍ಡಿಪಿಐ ಕಾರ್ಯಕರ್ತರು ಕೊಲೆ ನಡೆಸಿದ್ದು, ಇದರ ಪ್ರತೀಕಾರವಾಗಿ ಶಾನ್ ಅವರ ಕೊಲೆ ನಡೆದಿರುವುದಾಗಿ ಸಂಶಯಿಸಲಾಗಿದೆ. ದಕ್ಷಿಣ ವಲಯ ಐ.ಜಿ ಹರ್ಷಿತಾ ಅಟ್ಟಲ್ಲೂರಿ ನೇತೃತ್ವದಲ್ಲಿ ಜಿಲ್ಲಾದ್ಯಂತ ಬಂದೋಬಸ್ತ್ ಏರ್ಪಡಿಸಲಾಗಿದೆ.