ನವದೆಹಲಿ :ದೇಶದಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಕ್ಲಿನಿಕ್‌ಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆ ವಿಧೇಯಕವನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ. ಇದು ಐವಿಎಫ್ ಕೇಂದ್ರಗಳನ್ನು ಹಾಗೂ ಅಂಡಾಣು ಅಥವಾ ವೀರ್ಯ ಬ್ಯಾಂಕ್‌ಗಳನ್ನು ಕೂಡ ಒಳಗೊಂಡಿದೆ.
ಸಂತಾನೋತ್ಪತ್ತಿ ನೆರವಿನ ಕಾರ್ಯ ಕೈಗೊಳ್ಳುವವರ ಆರೋಗ್ಯದ ಮೇಲೆ ಪರಿಣಾಮಗಳು ಉಂಟಾಗುವುದರಿಂದ ಅಂತಹ ಕ್ಲಿನಿಕ್‌ಗಳನ್ನು ನಿಯಂತ್ರಿಸುವ ಅಗತ್ಯತೆ ಇದೆ. ಒಂದು ವೇಳೆ ನಿಯಂತ್ರಣ ಇಲ್ಲದೇ ಇದ್ದರೆ, ಅನೈತಿಕ ಅಭ್ಯಾಸಗಳು ಹೆಚ್ಚಲಿವೆ ಎಂದು ಮಾಂಡವಿಯ ಹೇಳಿದರು. ಈ ನಡುವೆ ಪ್ರತಿಪಕ್ಷಗಳ ಸಂಸದರು ದೇಶದಲ್ಲಿರುವ ಪುರುಷ ಸಲಿಂಗಿ, ಸ್ತ್ರೀ ಸಲಿಂಗಿ, ಲಿಂಗಾಂತರಿ ವ್ಯಕ್ತಿಗಳನ್ನು ಈ ವಿಧೇಯಕದ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ ಎಂದು ಗುರುತಿಸಿದ್ದಾರೆ. ''ಈ ವಿಧೇಯಕ ಸಂತನಾತ್ಪೋತ್ತಿ ನೆರವಿನ ತಂತ್ರಜ್ಞಾನವನ್ನು ಕೇವಲ ಭಿನ್ನ ಲಿಂಗಿ ವಿವಾಹಿತ ಜೋಡಿಗೆ ಹಾಗೂ ವಿವಾಹ ಪ್ರಾಯ ಮೀರಿದ ಮಹಿಳೆಯರಿಗೆ ಮಾತ್ರ ಬಳಸಲು ಅವಕಾಶ ನೀಡಲಿದೆ. ಒಂಟಿ ಪುರುಷ, ಸಲಿಂಗಕಾಮಿ ಜೋಡಿ, ಎಲ್‌ಜಿಬಿಟಿ ಕ್ಯೂ ವ್ಯಕ್ತಿಗಳನ್ನು ಈ ವಿಧೇಯಕದಿಂದ ಹೊರತುಪಡಿಸಲಾಗಿದೆ'' ಎಂದು ಬಹುಜನ ಸಮಾಜ ಪಕ್ಷದ ಸಂಸದೆ ಸಂಗೀತಾ ಅಝಾದ್ ಅವರು ಹೇಳಿದರು. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಈ ವಿಧೇಯಕ ವಿಕ್ಟೋರಿಯ ಹಾಗೂ ವಶಾಹತುಶಾಹಿ ಕಾಲದ ಮನಸ್ಥಿತಿಯಿಂದ ರೂಪಿಸಲಾಗಿದೆ. ಈ ವಿಧೇಯಕ ಸೇರಿಸುವುದಕ್ಕಿಂತ ಹೆಚ್ಚು ಜನರನ್ನು ಕೈಬಿಟ್ಟಿದೆ ಎಂದಿದ್ದಾರೆ. ಈ ವಿಧೇಯಕ 'ಪಿತೃಪ್ರಧಾನ'ವಾದುದು ಎಂದು ವಿವರಿಸಿದ ಕಾರ್ತಿ ಚಿದಂಬರಂ, ಅಂಡಕ ದಾನ ಮಾಡುವ ಸಾಮರ್ಥ್ಯ ಇರುವ ಮಹಿಳೆ ವಿವಾಹಿತೆಯಾಗಿರಬೇಕು ಹಾಗೂ ಆಕೆಗೆ ಕನಿಷ್ಠ 3 ವರ್ಷದ ಮಗುವಿರಬೇಕು. ಅನಂತರ ಮಾತ್ರವೇ ಆಕೆ ದಾನಿಯಾಗಲು ಸಾಧ್ಯ. ಆದರೆ, ಒಂಟಿ ಮಹಿಳೆ ಅಂಡಕ ದಾನಿಯಾಗಲು ಸಾಧ್ಯವಿಲ್ಲ. ಇದು ಪಿತೃಪ್ರಭುತ್ವದ ಚಿಂತನೆ ಎಂದರು.