ನವದೆಹಲಿ: ಲೋಕಸಭೆಯ ಸ್ಪೀಕರ್ ಸದನದಲ್ಲಿ ಕೇಂದ್ರ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವು ಕೇಂದ್ರ ಸಚಿವರ ವರ್ತನೆಗೆ ಗರಂ ಆಗಿರುವ ಸ್ಪೀಕರ್ ಓಂ ಬಿರ್ಲಾ, "ಲೋಕಸಭೆಯಲ್ಲಿ ನಿಮ್ಮ ಕಚೇರಿ ನಡೆಸಬೇಡಿ" ಎಂದು ಎಚ್ಚರಿಸಿದ್ದಾರೆ
ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡ ಬಳಿಕ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರೊಂದಿಗೆ ಮಾತನಾಡುವುದಕ್ಕೆ ಅವರಿದ್ದಲ್ಲಿಗೆ ಸದಸ್ಯರೊಬ್ಬರು ಆಗಮಿಸಿದ್ದರು.
ಇದನ್ನು ಗಮನಿಸಿದ ಸ್ಪೀಕರ್, ಮಾನ್ಯ ಸದಸ್ಯರು, ಸಚಿವರು ತಮ್ಮ ಕಚೇರಿಯನ್ನು ಇಲ್ಲಿಂದ ನಡೆಸಬಾರದು, ಸಚಿವರು ಏನೇ ಇದ್ದರೂ ತಮ್ಮನ್ನು ಕಚೇರಿಯಲ್ಲೇ ಭೇಟಿ ಮಾಡುವಂತೆ ಸದಸ್ಯರಿಗೆ ತಿಳಿಸಬೇಕೆಂದು" ಬಿರ್ಲಾ ಸೂಚಿಸಿದ್ದಾರೆ.
ಸದನದ ಕಲಾಪ ಚಾಲ್ತಿಯಲ್ಲಿದ್ದಾಗಲೂ ಸಹ ವಿವಿಧ ಪಕ್ಷಗಳ ಸದಸ್ಯರು ಸಚಿವರಿದ್ದಲ್ಲಿಗೆ ಹೋಗಿ ಅವರ ಸಚಿವಾಲಯದ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾರೆ.
ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡ ಬಳಿಕವೂ ತಮ್ಮ ಪ್ರತಿಕ್ರಿಯೆಯನ್ನು ಮುಂದುವೆರೆಸುತ್ತಿದ್ದ ಕೇಂದ್ರ ಸಚಿವ ಕೈಲಾಶ್ ಚೌಧರಿ ವಿರುದ್ಧವೂ ಬಿರ್ಲಾ ಅಸಮಾಧಾನಗೊಂಡರು.