ಕಾಸರಗೋಡು: ಕೇರಳ ಕೇಂದ್ರ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವ ಡಿ. 21ರಂದು ನಡೆಯಲಿದ್ದು, ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗವಹಿಸಲಿದ್ದಾರೆ. ಕ್ಯಾಂಪಸ್ ವಠಾರದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರಂಭದಲ್ಲಿ ವಿಶ್ವ ವಿದ್ಯಾಲಯದ 742 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಸಲಿರುವುದಾಗಿ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಡಾ. ಎಂ. ಸಂತೋಷ್‍ಕುಮಾರ್ ತಿಳಿಸಿದ್ದಾರೆ.
ವಿಶ್ವ ವಿದ್ಯಾಲಯದ ಕುಲಪತಿ, ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಪಾಳ್ಗೊಳ್ಳುವರು. ಉಪಕುಲಪತಿ ಸಮಾರಂಭದ ಅಧ್ಯಕ್ಷತೆ ವಹಿಸುವರು. 2018-20ನೇ ಸಾಲಿನ ಪದವಿಪ್ರದಾನ ನಡೆಯಲಿರುವುದು.29ಮಂದಿಗೆ ಪದವಿ, 652ಮಂದಿಗೆ ಸ್ನಾತಕೋತ್ತರ ಪದವಿ, 52ಮಂದಿಗೆ ಪಿ.ಎಚ್.ಡಿ ಹಾಗೂ ಒಂಬತ್ತು ಮಂದಿಗೆ ಪಿ.ಜಿ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಏರ್ಪಡಿಸಲಾಗಿದೆ. 300ಮಂದಿಗೆ ಮಾತ್ರ ಪ್ರವೇಶಾನುಮತಿಯಿದ್ದು, ಸರ್ಕಾರದ ವಿಶೇಷಾನುಮತಿಯೊಂದಿಗೆ 700ಮಂದಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎರಡು ಡೋಸ್ ವ್ಯಾಕ್ಸಿನೇಶನ್ ಪಡೆದವರು, 72ತಾಸುಗಳೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿ ಜತೆಗಿರಿಸಬೇಕು. ಇನ್ನು ವಿವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಳ್ಳುವವರು ಇವೆರಡರ ಜತೆಗೆ ಅಂದು ಬೆಳಗ್ಗೆ ರ್ಯಾಂಡಮ್ ಆ್ಯಂಟಿಜೆನ್ ತಪಾಸಣೆ ನಡೆಸಿದ ವರದಿ ಜತೆಗಿರಿಸುವುದು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು, ಮಾಧ್ಯಮದವರಿಗೆ ಮಧ್ಯಾಹ್ನ 2.30ರ ಮುಂಚಿತವಾಗಿ ಸಭಾಂಗಣಕ್ಕೆ ಆಗಮಿಸುವಂತೆ ತಿಳಿಸಲಾಗಿದೆ.
ರಾಷ್ಟ್ರಪತಿ ಮಧ್ಯಾಹ್ನ ಆಗಮನ:
ರಾಷ್ಟ್ಪತಿ ರಾಮನಾಥ ಕೋವಿಂದ ಅವರು ಡಿ. 21ರಂದು ಮಧ್ಯಾಹ್ನ 12.30ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು. ಅಲ್ಲಿಂದ ಮಧ್ಯಾಹ್ನ 1ಕ್ಕೆ ಹೆಲಿಕಾಪ್ಟರ್ ಮೂಲಕ ಕ್ಯಾಂಪಸ್ ಹೆಲಿಪ್ಯಾಡ್‍ಗೆ ಆಗಮಿಸುವರು. ಅಲ್ಲಿಂದ ರಸ್ತೆಮೂಲಕ ಬೇಕಲ ರೆಸಾರ್ಟ್‍ಗೆ ತೆರಳುವರು. 3.20ಕ್ಕೆ ಕ್ಯಾಂಪಸ್‍ಗೆ ಆಗಮಿಸುವ ರಾಷ್ಟ್ರಪತಿ ಅವರನ್ನು ಡೆಫೆನ್ಸ್ ಬ್ಯಾಂಡ್‍ನೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತರಲಾಗುವುದು. ಸಂಜೆ 4.30ಕ್ಕೆ ಕಾರ್ಯಕ್ರಮ ಕಳೆದು ರಾಷ್ಟ್ರಪತಿ ನಿರ್ಗಮಿಸಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಕ ಡಾ. ಎಂ. ಮುರಳೀಧರನ್ ನಂಬ್ಯಾರ್, ಡೀನ್ ಅಕಾಡಮಿಕ್ ಪ್ರೊ. ಅಮೃತ್ ಜಿ. ಕುಮಾರ್, ಪಿ.ಆರ್.ಓ ಸುಜಿತ್ ಕೆ, ಮೀಡಿಯ ಆಂಡ್ ಪಬ್ಲಿಕ್ ರಿಲೇಶನ್ಸ್ ಕಮಿಟಿ ಕನ್ವೀನರ್ ಡಾ. ಟಿ.ಕೆ ಅನೀಶ್ ಕುಮಾರ್ ಉಪಸ್ಥಿತರಿದ್ದರು.