ಕಾಸರಗೋಡು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಾರಿಗೊಳಿಸಿರುವ ಮಕ್ಕಳ ಸ್ನೇಹಿ ಕೇರಳ ಯೋಜನೆಯ ಅಂಗವಾಗಿ ಜಿಲ್ಲಾ, ಬ್ಲಾಕ್, ಗ್ರಾಮ ಮತ್ತು ಪುರಸಭೆ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಕ್ಕಳ ಹಕ್ಕುಗಳ ಸಾಕ್ಷರತೆಯನ್ನು ಖಾತರಿಪಡಿಸುವ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸುವ ಉದ್ದೇಶದಿಂದ ಮಕ್ಕಳ ಸ್ನೇಹಿ ಕೇರಳದ ಮೂರನೇ ಹಂತದ ಅಂಗವಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾಞಂಗಾಡ್‍ನ ಅಲಾಮಿಪಳ್ಳಿಯಲ್ಲಿರುವ ರಾಜ್ ರೆಸಿಡೆನ್ಸಿಯಲ್ಲಿ ನಡೆದ ಕಾರ್ಯಾಗಾರವನ್ನು ಶಾಸಕ ಇ ಚಂದ್ರಶೇಖರನ್ ಉದ್ಘಾಟಿಸಿದರು. ಮಕ್ಕಳಲ್ಲಿ ಸೈಬರ್ ಕ್ರೈಂ, ಮಾದಕ ವ್ಯಸನ ಹೆಚ್ಚುತ್ತಿದ್ದು, ವಾರ್ಡ್ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸುವುದರಿಂದ ಅಂತಹ ಮಕ್ಕಳನ್ನು ಗುರುತಿಸಿ ವಿಶೇಷ ಕಾಳಜಿ ವಹಿಸಿ ರಕ್ಷಣೆ ನೀಡಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ.ಮನೋಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಮಕ್ಕಳ ರಕ್ಷಣಾ ಸಮಿತಿಗಳ ಪರಿಣಾಮಕಾರಿತ್ವದಿಂದ ಮಕ್ಕಳ ಮೇಲಿನ ಶೋಷಣೆ ತಪ್ಪಿಸಬಹುದಾಗಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಮಕ್ಕಳ ಕುಂದುಕೊರತೆ ನಿವಾರಣಾ ಕೇಂದ್ರಗಳಾಗಿ ಪರಿವರ್ತನೆಯಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ರಕ್ಷಣಾ ಆಯೋಗದ ಸದಸ್ಯ ಫಿಲಿಪ್ ಪರಕ್ಕಾಟ್, ಕಾಞಂಗಾಡು ನಗರಸಭಾ ಉಪಾಧ್ಯಕ್ಷ ಬಿಲ್ಟಕ್ ಅಬ್ದುಲ್ಲ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಪಿ.ರಜಿತಾ, ಎ.ಕೆ.ಪ್ರಿಯಾ, ಎಂ.ಆರ್.ಶಿವಪ್ರಸಾದ್, ಬಾಲ ನ್ಯಾಯ ಮಂಡಳಿ ಸದಸ್ಯ ಬಿ.ಮೋಹನಕುಮಾರ್, ಡಿವೈಎಸ್ಪಿ ಸತೀಶ್ ಕುಮಾರ್ ಅಲಕ್ಕಲ್, ಹಿರಿಯ ತಾಂತ್ರಿಕ ಅಧಿಕಾರಿ, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಆಲ್ಫ್ರೆಡ್ ಜೆ. ಜಾರ್ಜ್ ಮಾತನಾಡಿದರು. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಪಿ.ಪಿ.ಶ್ಯಾಮಲಾದೇವಿ ಸ್ವಾಗತಿಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಎ.ಬಿಂದು ವಂದಿಸಿದರು. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಸಿ.ವಿಜಯಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿಂದು ಸಿ.ಎ, ಅ. ಎ ಶ್ರೀಜಿತ್ ಹಾಗೂ ಮುಂಡೇರಿ ಬಾಲ ಸ್ನೇಹಿ ಪಂಚಾಯಿತಿ ಸಂಯೋಜಕ ಪಿ ಭಾಸ್ಕರನ್ ನೇತೃತ್ವ ವಹಿಸಿದ್ದರು. ತರಬೇತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿಗಳ ಅಧ್ಯಕ್ಷರಾಗಿ ಕಲ್ಯಾಣ ಸ್ಥಾಯಿ ಸಮಿತಿಯ ಅಧ್ಯಕ್ಷರು, ಆಡಳಿತಾಧಿಕಾರಿಗಳಾಗಿ ಸಿಡಿಪಿಒಗಳು, ಐಸಿಡಿಎಸ್ ಮೇಲ್ವಿಚಾರಕರು, ಜಿಲ್ಲಾ ಮಟ್ಟದ ಮಕ್ಕಳ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮತ್ತು ಚೈಲ್ಡ್ ಲೈನ್ ಸಂಯೋಜಕರು ಭಾಗವಹಿಸಿದ್ದರು.