ನವದೆಹಲಿ: ವಿಧಾನ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಕೋವಿಡ್-19 ಲಸಿಕೆ ಹಾಕುವುದನ್ನು ವೇಗಗೊಳಿಸಿ ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಆಯೋಗ ಹೇಳಿದೆ.
2022ರ ಮೊದಲ ತ್ರೈಮಾಸಿಕದಲ್ಲಿ, ಐದು ರಾಜ್ಯಗಳಲ್ಲಿ ಅಂದರೆ, ಗೋವಾ, ಮಣಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿದೆ. ಕೋವಿಡ್ -19 ಪ್ರಕರಣಗಳ ಉಲ್ಬಣ ಮತ್ತು ಓಮಿಕ್ರಾನ್ ರೂಪಾಂತರದ ಭೀತಿ ನಡುವೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ರ್ಯಾಲಿಗಳ ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸಿದೆ.
ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಚುನಾವಣೆ ಎದುರಿಸಲಿರುವ ಪ್ರತಿ ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಲಾಗಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದರು.
ಮೊದಲ ಡೋಸ್ ಲಸಿಕೆ ಕವರೇಜ್ ಉತ್ತರಾಖಂಡ ಮತ್ತು ಗೋವಾದಲ್ಲಿ ನೂರಕ್ಕೆ ಹತ್ತಿರವಾಗಿದ್ದರೆ, ಇದು ಉತ್ತರ ಪ್ರದೇಶದಲ್ಲಿ ಶೇ. 85 ಮತ್ತು ಮಣಿಪುರ ಮತ್ತು ಪಂಜಾಬ್‌ನಲ್ಲಿ ಸುಮಾರು 80 ಪ್ರತಿಶತದಷ್ಟು ಲಸಿಕೆ ಹಾಕಲಾಗಿದೆ.
ಲಸಿಕೆ ಕವರೇಜ್ ಕಡಿಮೆ ಇರುವ ರಾಜ್ಯಗಳಲ್ಲಿ, ಲಸಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಚುನಾವಣಾ ಆಯೋಗವು ಆರೋಗ್ಯ ಸಚಿವಾಲಯಕ್ಕೆ ಕೇಳಿಕೊಂಡಿದೆ.
ಚುನಾವಣೆಗಳನ್ನು ಮುಂದೂಡುವುದನ್ನು ಪರಿಗಣಿಸಿ: ಅಲಹಾಬಾದ್ ಹೈಕೋರ್ಟ್
ಗುರುವಾರ, ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಅಲಹಾಬಾದ್ ಹೈಕೋರ್ಟ್ ಪೀಠವು ದೇಶದಲ್ಲಿ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ವಿಧಾನಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡಲು ಮತ್ತು ಎಲ್ಲಾ ರಾಜಕೀಯ ರ್ಯಾಲಿಗಳನ್ನು ನಿಷೇಧಿಸಲು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರನ್ನು ಕೇಳಿದಾಗ, ಆಯೋಗವು ಶೀಘ್ರದಲ್ಲೇ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಅಗತ್ಯವಿರುವ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮತದಾನಕ್ಕೂ ಮುನ್ನ ಎನ್‌ಸಿಬಿ, ಬಿಎಸ್ಎಫ್, ಐಟಿಬಿಪಿಗಳನ್ನು ಚುನಾವಣಾ ಆಯೋಗ ಭೇಟಿ ಮಾಡಲಿದೆ. ಆರೋಗ್ಯ ಸಚಿವಾಲಯದ ಹೊರತಾಗಿ, ಚುನಾವಣಾ ಆಯೋಗವು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಗಳಲ್ಲಿ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಕೇಳಿದೆ.
ಚುನಾವಣಾ ಸಮಿತಿಯು ವಿಶೇಷವಾಗಿ ಪಂಜಾಬ್ ಮತ್ತು ಗೋವಾದಲ್ಲಿ ಚುನಾವಣೆಗಳ ಮೇಲೆ ಡ್ರಗ್ಸ್ ಪ್ರಭಾವವನ್ನು ಪರಿಶೀಲಿಸುವಂತೆ ಎನ್‌ಸಿಬಿ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.