ಬೆಂಗಳೂರು: ಕೋವಿಡ್-19 ನ ಓಮಿಕ್ರಾನ್ ರೂಪಾಂತರಿ ಸೋಂಕು ಬೇರೆ ರೂಪಾಂತರಿಗಳಿಗಿಂತಲೂ ವೇಗವಾಗಿ ಹರಡುವುದರಿಂದ ಮುಂದಿನ 10 ದಿನಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿಯ ಸಾಂಕ್ರಾಮಿಕ ರೋಗಗಳ ವಿಭಾಗದ ಹಿರಿಯ ಸಲಹೆಗಾರ ಡಾ. ಸುಬ್ರಹ್ಮಣಿಯನ್ ಸ್ವಾಮಿನಾಥನ್ ಹೇಳಿದ್ದಾರೆ. ಅನಿಶ್ಚಿತತೆಯನ್ನು ಎದುರಿಸುವುದು; ದಿ ಕೋವಿಡ್ ಕ್ರಾಸ್ ವರ್ಡ್ಸ್ ಎಂಬ ವಿಷಯದ ಬಗ್ಗೆ ವೆಬಿನಾರ್ ನಲ್ಲಿ ಅವರು ಮಾತನಾಡುತ್ತಿದ್ದರು.
ಓಮಿಕ್ರಾನ್ ಹರಡುತ್ತಿರುವ ವೇಗ ಅತ್ಯಂತ ತೀವ್ರವಾಗಿದೆ. ಡೆಲ್ಟಾದಲ್ಲಿ ಶೇ.8 ರಷ್ಟಿದ್ದ ಸೋಂಕು ಮರುಕಳಿಸುವ ಪ್ರಮಾಣ ಓಮಿಕ್ರಾನ್ ನಲ್ಲಿ ಶೇ.40 ರಷ್ಟಿದೆ. ಸೋಂಕು ಅಪಾಯ ಇದೆ. ಆದರೆ ತೀವ್ರತೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಬೇರೆ ದೇಶಗಳಲ್ಲಿ ಲಸಿಕೆ ಪಡೆಯದೇ ಇರುವವರಿಗೆ ಹಾಗೂ ಲಸಿಕೆಯನ್ನು ಭಾಗಶಃ ಪಡೆದವರಿಗೆ ತೀವ್ರವಾಗಿ ಈ ಸೋಂಕು ಬಾಧಿಸುತ್ತಿದೆ ಎಂದು ಡಾ. ಸ್ವಾಮಿನಾಥನ್ ಹೇಳಿದ್ದು, ಭಾರತವೂ ಸೇರಿದಂತೆ ಎಲ್ಲೆಡೆ ಮೂರನೇ ಅಲೆ ಪ್ರಾರಂಭವಾಗಿದ್ದು ಮುಂದಿನ 2 ತಿಂಗಳಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ನ್ನು ಹೆಚ್ಚಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಏಮ್ಸ್ ನ ನಿರ್ದೇಶಕ ರಣ್ದೀಪ್ ಗುಲೇರಿಯಾ ಡಾ. ಸ್ವಾಮಿನಾಥನ್ ಅವರ ಹೇಳಿಕೆಗೆ ಸಹಮತ ಸೂಚಿಸಿದ್ದು, ಭಾರತದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ. ಓಮಿಕ್ರಾನ್ ಪ್ರಕರಣ ಹೆಚ್ಚಳವಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಿಸುವವರ ಸಂಖ್ಯೆ ಕಡಿಮೆ ಇದ್ದರೂ ಸಣ್ಣ ಪ್ರಮಾಣದ ರೋಗಲಕ್ಷಣಗಳು ಕಂಡುಬಂದರೂ ಭೀತಿಯಿಂದ ಆಸ್ಪತ್ರೆಗಳು ಭರ್ತಿಯಾಗಲಿವೆ ಎಂದು ಡಾ.ಗುಲೇರಿಯಾ ಹೇಳಿದ್ದಾರೆ. ಓಮಿಕ್ರಾನ್ ಹೆಚ್ಚಳದ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡುವುದು ಉತ್ತಮ ಎನ್ನುತ್ತಾರೆ ತಜ್ಞರು.