ತಿರುಚ್ಚಿ: ಶ್ರೀರಂಗಂನಲ್ಲಿರುವ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ಖ್ಯಾತ ಭರತನಾಟ್ಯ ಡ್ಯಾನ್ಸರ್ ನ್ನು ಅಲ್ಲಿನ ನಿವಾಸಿಯೊಬ್ಬರು ತಡೆದಿರುವ ಘಟನೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಸರಾಂತ ಭರತ ನಾಟ್ಯ ಕಲಾವಿದರಾಗಿರುವ ಜಾಕೀರ್ ಹುಸೇನ್ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ದೇವಾಲಯದ ಮೂಲಗಳು ಹೇಳಿವೆ.
ಜಾಕೀರ್ ಹುಸೇನ್ ದೇವಾಲಯ ಪ್ರವೇಶಿಸಿದ ಸಂದರ್ಭದಲ್ಲಿ ಅರಿಯಪಾದಲ್ ಪ್ರವೇಶ ದ್ವಾರದ ಬಳಿ ಸ್ಥಳೀಯ ನಿವಾಸಿಯೊಬ್ಬರು ಅವರನ್ನು ತಡೆದಿದ್ದು, ಇದರಲ್ಲಿ ಹೋಗಲು ಹಿಂದೂಗಳಿಗೆ ಮಾತ್ರ ಅವಕಾಶವಿರುವುದಾಗಿ ಹೇಳಿದ್ದಾನೆ. ಇದರಿಂದಾಗಿ ಹುಸೇನ್ ದೇವಾಲಯದಿಂದ ಹೊರಗೆ ಬಂದಿದ್ದಾರೆ.
ಘಟನೆ ನಡೆದ ಮಾರನೇ ದಿನ ಈ ವಿಚಾರ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹುಸೇನ್ ಹಾಗೂ ಸ್ಥಳೀಯ ನಿವಾಸಿ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸೋಮವಾರದೊಳಗೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಶ್ರೀರಂಗಂ ದೇವಾಲಯದ ಜಂಟಿ ಆಯುಕ್ತರಿಗೆ ನಿರ್ದೇಶಿಸಿರುವುದಾಗಿ ಹಿಂದೂ ಧಾರ್ಮಿಕ ಮತ್ತು ಚಾರಿಟೇಬಲ್ ದತ್ತಿ ಸಚಿವ ಶೇಖರ್ ಬಾಬು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಒಂದು ವೇಳೆ ಆರೋಪ ನಿಜವಾಗಿದ್ದಲ್ಲಿ ಸಿಸಿಟಿವಿ ದೃಶ್ಯಾವಳಿ ಮತ್ತು ವರದಿ ಆಧರಿಸಿ ಸ್ಥಳೀಯನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.